ತಹಶೀಲ್ದಾರ ಲಾಂಜೇಕರ್‌ಗೆ ನಿಂದನೆ:
ಶಾಸಕ ಸೈಲ್ ವಿರುದ್ಧ ಆರೋಪ
ಅಂಕೋಲಾ, ಮೇ 12: ಶಾಸಕ ಸತೀಶ ಸೈಲ್ ಅವರು ಬುಧವಾರ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಾರ್ವಜನಿಕರ ಎದುರು ತಹಶೀಲ್ದಾರ್ ವಿ.ಜಿ.ಲಾಂಜೇಕರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ಅಂಕೋಲಾ ತಾಲೂಕು ಕಂದಾಯ ಇಲಾಖೆ ನೌಕರರು ತಹಶೀಲ್ದಾರ್ ಅವರ ಮುಖಾಂತರ ಗುರುವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಕಳೆದ ಮೇ 11ರಂದು ತಾಪಂ ಸಭಾಭವನದಲ್ಲಿ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದ ಬಳಿಕ ಶಾಸಕ ಸತೀಶ ಸೈಲ್ ಅವರು ಕುಮಟಾ ಉಪವಿಭಾಗಾಧಿಕಾರಿ ಡಿ. ಶೋಭಾ ಮತ್ತು ತಹಶೀಲ್ದಾರ್ ಲಾಂಜೇಕರ ಅವರೊಂದಿಗೆ ಅಂಕೋಲಾ ತಾಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ಚರ್ಚೆಸುತ್ತಾ, ಶಾಸಕರು ಏಕಾಏಕಿ ಕೋಪಗೊಂಡು ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ನಿಮಗೆ ತಹಶೀಲ್ದಾರ್ ಆಗಲು ಅರ್ಹತೆ ಇದೆಯೇ? ಐ.ಆರ್.ಬಿ. ಅವರ ಬಳಿ ಭಿಕ್ಷೆ ಬೇಡಲು ಹೋಗಿ ಎಂದು ಸಾರ್ವಜನಿಕರ ಮುಂದೆ ಅಸಹ್ಯವಾಗಿ ನಿಂದಿಸಿದ್ದಾರೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶದ ಮೇರೆಗೆ ಐ.ಆರ್.ಬಿ. ಕಂಪೆನಿಯವರಿಂದ ಟ್ಯಾಂಕರನ್ನು ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆ ಕಾರಣಕ್ಕಾಗಿ ಶಾಸಕರು ಸಾರ್ವಜನಿಕರ ಮುಂದೆ ಸರಕಾರಿ ಅಧಿಕಾರಿಯೊಬ್ಬರನ್ನು ಕೀಳಾಗಿ ನಿಂಧಿಸಿರುವುದು ಖಂಡನೀಯ. ತಾಲೂಕಿನಲ್ಲಿ ಬರಗಾಲದ ಛಾಯೆ ಇದ್ದು, ಕುಡಿಯುವ ನೀರಿನ ಗಂಭೀರ ಸಮಸ್ಯೆ ಇರುವುದರಿಂದ ಸರಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಹಾಗೂ ಕಚೇರಿಯ ಸಿಬ್ಬಂದಿ ರಜಾದಿನಗಳಲ್ಲೂ ಕಚೇರಿಯಲ್ಲಿ ಹಾಜರಾಗಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ನಿರಂತರವಾಗಿ ಶ್ರಮಿಸುತ್ತಿದ್ದರೂ ಶಾಸಕರು ಕೀಳು ಮಟ್ಟದ ಮಾತುಗಳಿಂದ ನಿಂದಿಸಿರುವುದನ್ನು ಕಂದಾಯ ಇಲಾಖೆ ತೀವೃವಾಗಿ ಖಂಡಿಸುತ್ತದೆ ಎಂದು ಮನವಿ ಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆ ಒದಗಿಸುತ್ತಿರುವ ಕಂದಾಯ ಇಲಾಖೆ ನೌಕರ ರೊಂದಿಗೆ ಜನ ಪ್ರತಿನಿಧಿಗಳು ಅನುಚಿತವಾಗಿ ನಡೆದುಕೊಳ್ಳ ಬಾರದೆಂದು ಆಗ್ರಹಿಸಿದ ಕಂದಾಯ ಇಲಾಖೆಯ ನೌಕರರು, ಶಾಸಕರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.





