ಪಂಜಾಬ್ ವಿರುದ್ಧ ಗೆಲುವಿನ ಓಟ ಮುಂದುವರಿಸುವತ್ತ ಮುಂಬೈ ಚಿತ್ತ

ವಿಶಾಖಪಟ್ಟಣ, ಮೇ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿ ಗೆಲುವಿನ ಹಾದಿಗೆ ಮರಳಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಸನ್‌ರೈಸರ್ಸ್ ಹೈದರಾಬಾದ್‌ನ ವಿರುದ್ಧ 85 ರನ್‌ಗಳ ಅಂತರದ ಹೀನಾಯ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಮುಂಬೈ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ತಂಡವನ್ನು ಮಣಿಸಿತ್ತು. ರೋಹಿತ್ ಶರ್ಮ ನಾಯಕತ್ವದ ಮುಂಬೈ ತಂಡ 11 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಗಳಿಸಿದೆ. ಒಟ್ಟು 12 ಅಂಕ ಗಳಿಸಿರುವ ಮುಂಬೈ ಶುಕ್ರವಾರದ ಪಂದ್ಯದಲ್ಲೂ ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಪರದಾಡುತ್ತಿರುವ ಪಂಜಾಬ್ ತಂಡ ಈಗಾಗಲೇ ಐಪಿಎಲ್‌ನ ಪ್ಲೆ-ಆಫ್ ಸ್ಪರ್ಧೆಯಿಂದ ಹೊರ ನಡೆದಿದೆ. ಮುರಳಿ ವಿಜಯ್ ನೇತೃತ್ವದ ಪಂಜಾಬ್ ತಂಡ 10 ಪಂದ್ಯಗಳ ಪೈಕಿ ಏಳರಲ್ಲಿ ಸೋತಿದೆ.
ಮುಂಬೈ ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡಿರುವ ರೋಹಿತ್ ಶರ್ಮ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಸನ್‌ರೈಸರ್ಸ್ ವಿರುದ್ಧ 92 ರನ್ ಗಳಿಸಿದ್ದ ಮುಂಬೈ ತಂಡ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಚಿನ್ನಸ್ವಾಮಿ ಸ್ಟೇಡಿಯಂನಲಿ ಬುಧವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಆರ್‌ಸಿಬಿ ತಂಡವನ್ನು ಮುಂಬೈ ಬೌಲರ್‌ಗಳು 151 ರನ್‌ಗೆ ನಿಯಂತ್ರಿಸಿದ್ದರು. ಮುಂಬೈ ದಾಂಡಿಗರು 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿದ್ದರು.
ಬೆಂಗಳೂರು ವಿರುದ್ಧದ ಕಳೆದ ಪಂದ್ಯದಲ್ಲಿ ಬೌಲರ್‌ಗಳಾದ ಮಿಚೆಲ್ ಮೆಕ್ಲಿನಘನ್ ಹಾಗೂ ಟಿಮ್ ಸೌಥಿ ಉತ್ತಮ ಪ್ರದರ್ಶನ ನೀಡಿ ಮುಂಬೈಗೆ ಆರಂಭದಲ್ಲೇ ಮೇಲುಗೈ ಒದಗಿಸಿಕೊಟ್ಟಿದ್ದರು. ಸ್ಪಿನ್ನರ್ ಹರ್ಭಜನ್ ಸಿಂಗ್‌ರಲ್ಲದೆ ಮಧ್ಯಮ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ,ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಎದುರಾಳಿ ದಾಂಡಿಗರಿಗೆ ಸವಾಲಾಗಬಲ್ಲರು.
ಲೀಗ್‌ನ ಮಧ್ಯೆ ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಪಡೆದಿರುವ ಮುರಳಿ ವಿಜಯ್ ಉತ್ತಮ ಪ್ರದರ್ಶನ ನೀಡಲು ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಮತ್ತೊಂದು ಕಡೆಯಿಂದ ಬೆಂಬಲ ಸಿಗುತ್ತಿಲ್ಲ.
ಡೇವಿಡ್ ಮಿಲ್ಲರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್ ಕಳವಳಕಾರಿಯಾಗಿದೆ. ಮ್ಯಾಕ್ಸ್‌ವಲ್ ಪಂದ್ಯದಲ್ಲಿ ಆಡಿರಲಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ನ ಬೌಲಿಂಗ್ ವಿಭಾಗದಲ್ಲಿ ಸಂದೀಪ್ ಶರ್ಮ, ಮೋಹಿತ್ ಶರ್ಮ, ಅಕ್ಷರ್ ಪಟೇಲ್ ಹಾಗೂ ಸ್ಟೋನಿಸ್ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ.
ಪಂದ್ಯದ ಸಮಯ: ರಾತ್ರಿ 8:00







