ವೌಢ್ಯಾಚರಣೆ ಬ್ರಾಹ್ಮಣವಾದಿಗಳ ಆದಾಯದ ಮೂಲ: ವೆಂಕಟಸ್ವಾಮಿ
ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಧರಣಿ

ಬೆಂಗಳೂರು, ಮೇ 12: ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಮಾಡಲು ಹಿಂದೇಟು ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿಪರ ಹಾಗೂ ಹಿರಿಯ ಸಾಹಿತಿಗಳ ಮಾತಿಗೆ ಮನ್ನಣೆ ಕೊಡುತ್ತಿಲ್ಲ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ದಲಿತ ಪರ ಸಂಘಟನೆಗಳು ನಗರದ ಪುರಭವನದ ಮುಂಭಾಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೌಢ್ಯಾಚರಣೆಯಿಂದ ನಾಡಿಗೆ ಒಳಿತಾಗುವುದಿಲ್ಲ. ಇಂತಹ ಆಚರಣೆಗಳಿಂದಾಗಿ ನಾಡಿನ ಮುಗ್ಧ ಜನರು ಹಣ ಹಾಗೂ ಜೀವವನ್ನು ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಬೇಕೆಂದು ನಾಡಿನ ಹಿರಿಯ ಸಾಹಿತಿಗಳು, ಪ್ರಗತಿಪರರು, ಮಠಾಧೀಶರು ಹಾಗೂ ಹೋರಾಟಗಾರರು ಹಲವು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಇವರ ಮಾತಿಗೆ ಮನ್ನಣೆ ಕೊಡದ ರೀತಿಯಲ್ಲಿ ಕಾಯ್ದೆಯನ್ನು ಜಾರಿ ಮಾಡದೆ ಕುಂಟು ನೆಪಗಳನ್ನು ಹೇಳುತ್ತಿದೆ ಎಂದು ಡಾ.ವೆಂಕಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವೌಢ್ಯಾಚರಣೆಗಳು ಬ್ರಾಹ್ಮಣವಾದಿಗಳಿಗೆ ಸಾಕಷ್ಟು ಹಣವನ್ನು ತಂದುಕೊಡುತ್ತಿದೆ. ಹೀಗಾಗಿ ಹಣ ಮಾಡುವ ಉದ್ದೇಶದಿಂದ ಹೊಸ, ಹೊಸ ವೌಢ್ಯಾಚರಣೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ಕಡುಬಡವರು ತಮ್ಮ ದುಡಿಮೆಯ ಬಹುಪಾಲನ್ನು ಇಂತಹ ಆಚರಣೆಗೆ ಪೋಲು ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ತಿಳಿಸಿದರು.
ವೌಢ್ಯಾಚರಣೆಯಿಂದಾಗಿ ದಲಿತರನ್ನು ಬಲಿ ಕೊಡವಂತಹ ಹೀನಾಯ ಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ದಲಿತ ವ್ಯಕ್ತಿಗಳನ್ನು ನರಬಲಿ ಕೊಡಲಾಯಿತು. ಇಂತಹ ಪ್ರಕರಣಗಳು ಬೆಳಕಿಗೆ ಬರದ ರೀತಿಯಲ್ಲಿ ಪ್ರತಿದಿನ ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ತಡೆಯಬೇಕಾದ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿವೆ ಎಂದು ಡಾ.ವೆಂಕಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಮಡೆ ಸ್ನಾನ, ಸೋಮಯಾಗದಲ್ಲಿ ಪ್ರಾಣಿ ಬಲಿಕೊಡುವುದು ಸೇರಿದಂತೆ ಹಲವು ರೀತಿಯ ವೌಢ್ಯಾಚರಣೆಗಳು ನಡೆಯುತ್ತಿವೆ. ಇದರಿಂದ ರಾಜ್ಯ ವೈಜ್ಞಾನಿಕ ಹಾಗೂ ಪ್ರಗತಿಪರತೆಯತ್ತ ಸಾಗಲು ಸಾಧ್ಯವಾಗುವುದಿಲ್ಲ. ಇದು ಹೀಗೆ ಮುಂದುವರೆದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅಪಾಯವಿದೆ ಎಂದು ಅವರು ಹೇಳಿದರು.
ವಿಶ್ವದ ಮುಂದುವರೆದ ರಾಷ್ಟ್ರಗಳು ವೈಜ್ಞಾನಿಕತೆಯತ್ತ ಸಾಗುತ್ತಿದ್ದರೆ, ಭಾರತದ ವೌಢ್ಯಾಚರಣೆಯಲ್ಲಿ ಮುಳುಗಿದೆ. ಇದರಿಂದ ದೇಶದ ಯುವ ಜನತೆ ಎತ್ತ ಸಾಗಬೇಕೆಂಬುದು ತಿಳಿಯದಾಗಿದೆ. ಇದರಿಂದ ಭಾರತದ ಯುವ ಸಂಪತ್ತು ಹೊರ ದೇಶಗಳಿಗೆ ಪಲಾಯನವಾಗುವ ಅಪಾಯವಿದೆ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಲಯನ್ ಬಾಲಕೃಷ್ಣ, ಕರ್ನಾಟಕ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ರಾಂಪುರ ನಾಗೇಶ್, ಕರ್ನಾಟಕ ಯುವ ಸೇನೆಯ ರಾಜ್ಯಾಧ್ಯಕ್ಷ ಸಾಮ್ರಾಟ್ ಮಂಜು ಮತ್ತಿತರರಿದ್ದರು.





