ಸಿದ್ದರಾಮಯ್ಯ ಸರಕಾರಕ್ಕೆ 3 ವರ್ಷ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರಕ್ಕೆ 3 ವರ್ಷ ತುಂಬಿದೆ.
ಸರಕಾರದ 3 ವರ್ಷದ ಸಾಧನೆ ಹಾಗೂ ವೈಫಲ್ಯಗಳ ಬಗ್ಗೆ ನಾಡಿನ ಅನೇಕ ರಾಜಕಾರಣಿಗಳು, ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡಲಿ
ಎಚ್.ಡಿ.ಕುಮಾರಸ್ವಾಮಿ,
ಜೆಡಿಎಸ್ ರಾಜ್ಯಾಧ್ಯಕ್ಷ

ರಾಜ್ಯದಲ್ಲಿನ ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ್ದೆ ಈ ಸರಕಾರದ ಸಾಧನೆ.
ಸರಕಾರದ ಸಚಿವರು, ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಬಗ್ಗೆ ಚರ್ಚೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ರಾಜ್ಯದಲ್ಲಿನ ಸಮಸ್ಯೆಗಳ ಕುರಿತು ನಿಜವಾದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಆಡಳಿತ ನಡೆಸುವವರು ವಿಫಲರಾಗಿದ್ದಾರೆ. ಸರಕಾರದ ಪ್ರತಿಯೊಂದು ಯೋಜನೆಗಳು ಗುಣಾತ್ಮಕವಾಗಿ ಜನರಿಗೆ ತಲುಪುತ್ತಿಲ್ಲ. ಯೋಜನೆಗಳ ಹೆಸರಿನಲ್ಲೂ ಹಣ ಲೂಟಿ ಮಾಡಲಾಗುತ್ತಿದೆ. ಸರಕಾರದ ಕಾರ್ಯ ವೈಖರಿ ಬಗ್ಗೆ ನಮ್ಮ ಟೀಕೆಗಳು, ವಿಧಾನಸಭೆಯಲ್ಲಿ ನಡೆಯುವ ಚರ್ಚೆಗೆ ಸಮರ್ಪಕವಾದ ಉತ್ತರ ಸಿಗುವುದಿಲ್ಲ.
ರೈತರ ಸಾಲಮನ್ನಾ ಮಾಡಲಿ. ರೈತನಿಗೆ ಯಾವುದೆ ಜಾತಿಯಿಲ್ಲ. ಎಲ್ಲ ಸಮಾಜ ದವರು ರೈತರಾಗಿದ್ದಾರೆ. ಸರಕಾರ ರೈತರ ಬಗ್ಗೆ ಅನುಸರಿಸುತ್ತಿರುವ ನಡವಳಿಕೆಗಳ ಬಗ್ಗೆ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಲಿ.
ಜನನಾಯಕರಾಗಬೇಕಾದರೆ....
ಡಾ.ಸಿ.ಎಸ್.ದ್ವಾರಕಾನಾಥ್,
ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ

ಸಿದ್ದರಾಮಯ್ಯನವರ ಸಾಧನೆ ಅಂದಾಕ್ಷಣ ಎಲ್ಲರೂ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯಗಳನ್ನು ಹೆಸರಿಸುತ್ತಾರೆ. ಆದರೆ ಆ ಭಾಗ್ಯಗಳು ಸಾಧನೆಗಳಲ್ಲ, ಸರಕಾರದ ಚಾರಿಟಿ ಪ್ರೋಗ್ರಾಂಗಳು. ಈ ಸರಕಾರವಿದ್ದಾಗ ಚಾಲ್ತಿಯಲ್ಲಿದ್ದು, ಮತ್ತೊಂದು ಸರಕಾರದಲ್ಲಿ ಮೂಲೆಗುಂಪಾಗುವ ಕಾರ್ಯಕ್ರಮಗಳು. ಹಾಗಾಗಿ ಇವು ಸಿದ್ದರಾಮಯ್ಯನವರ ಸಾಧನೆಗಳಲ್ಲ. ಸಿದ್ದರಾಮಯ್ಯನವರನ್ನು ಪ್ರಗತಿಪರರು, ಸಮಾಜವಾದಿ, ಅಹಿಂದ ನಾಯಕರು ಎಂದು ಕರೆಯುತ್ತಾರೆ. ಆದರೆ ಅವರ ಕಾರ್ಯವೈಖರಿ ಆ ಮಟ್ಟವನ್ನು ತಲುಪಿಲ್ಲ.
ಉಳಿದಿರುವ 2 ವರ್ಷದಲ್ಲಾದರೂ, ತಮ್ಮ ಸುತ್ತ ಇರುವ ಅಪ್ಪ, ಅಣ್ಣ, ಅಯ್ಯಗಳಿಂದ ಹೊರಗೆ ಬರಬೇಕಾಗಿದೆ, ಭೂರಹಿತರಿಗೆ ಭೂಮಿ ಹಂಚಬೇಕಿದೆ, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ಕಾಯ್ದೆ ತರಬೇಕಿದೆ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ... ಇದಕ್ಕಿಂತಲೂ ಮುಖ್ಯವಾಗಿ ಅರಸು ಕಾಲದ ರೈತರಿಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳನ್ನೂ ಮತ್ತೆ ಜಾರಿಗೆ ತರಬೇಕಾಗಿದೆ. ಇದನ್ನು ಮಾಡಿದರೆ ಸಿದ್ದರಾಮಯ್ಯನವರು ನಾಡಿನ ಜನರ ಮನದಲ್ಲಿ ನಾಯಕನಾಗಿ ಉಳಿಯುತ್ತಾರೆ. ಇಲ್ಲವಾದರೆ...
ಆಡಳಿತ ಸುಧಾರಣೆಗೆಒತ್ತು ಅಗತ್ಯ
ಕೆ.ಎಸ್.ಪುಟ್ಟಣ್ಣಯ್ಯ,
ಸರ್ವೋದಯ ಪಕ್ಷದ ಶಾಸಕಹಾಗೂ ರೈತ ಮುಖಂಡ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೂರು ವರ್ಷಗಳ ಆಡಳಿತ ವ್ಯವಸ್ಥೆ ಕುಸಿದಿದೆ. ಉಳಿದ ಎರಡು ವರ್ಷ ಆಡಳಿತ ಸುಧಾರಣೆಗೆ ವಿಶೇಷ ಒತ್ತು ನೀಡುವ ಮೂಲಕ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಕ್ರಮ ಕೈಗೊಳ್ಳಬೇಕು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೆಲ ಯೋಜನೆಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿನ ಭೀಕರ ಸ್ವರೂಪದ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರ ಬದುಕಿನ ಉನ್ನತೀಕರಣಕ್ಕೆ ಸರಕಾರ ಆದ್ಯತೆಯನ್ನು ನೀಡಬೇಕಾಗಿತ್ತು. ‘ಕೃಷಿ’ ರಾಜ್ಯದ ಆರ್ಥಿಕ ಸಬಲೀಕರಣಕ್ಕೆ ಅತ್ಯಗತ್ಯ. ಆದರೆ, ಆ ಕ್ಷೇತ್ರವನ್ನು ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕೃಷಿ ಚಟುವಟಿಕೆ ಕ್ಷೀಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ಗುಳೆ’ ವ್ಯಾಪಕವಾಗಿದೆ. ರಾಜ್ಯ ಸರಕಾರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಸ್ವಾತಂತ್ರ ಬಂದ ಬಳಿಕ ದೇಶದಲ್ಲಿ ಬೇಡುವ ಪದ್ಧತಿ ಕಡಿಮೆಯಾಗಿ, ಎಲ್ಲ ವರ್ಗದ ಜನರು ಆರ್ಥಿಕವಾಗಿ ಸದೃಢರಾಗಬೇಕಿತ್ತು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಉಳಿದ ಅವಧಿಯಲ್ಲಾದರೂ ಆ ದಿಕ್ಕಿನತ್ತ ಸರಕಾರ ಸಾಗಬೇಕು. ರೈತರ ಬದುಕಿನ ಉನ್ನತೀಕರಣಕ್ಕೆ ಶ್ರಮಿಸಬೇಕೆಂಬುದು ನಮ್ಮ ಅಪೇಕ್ಷೆ.
ಯೋಜನೆಜಾರಿಗೆ ತಂದಿಲ್ಲ
ಜಗದೀಶ್ ಶೆಟ್ಟರ್,ವಿರೋಧ ಪಕ್ಷದ ನಾಯಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದಲ್ಲಿ ಜನತೆ ನಿರೀಕ್ಷಿಸಿದಷ್ಟು ಕೆಲಸವನ್ನು ಮಾಡಿಲ್ಲ. ತನ್ನದು ಜನಪರ ಸರಕಾರ ಎಂದು ಮುಖ್ಯಮಂತ್ರಿ ಹೇಳಿಕೊಂಡು ಬಂದಿದ್ದಾರೆ. ಅಹಿಂದ ಪರ, ರೈತರ ಪರ, ಬಡವರ ಪರ ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ, ಇಲ್ಲಿಯವರೆಗೆ ಅಹಿಂದ ಜನಾಂಗಕ್ಕೆ ಹಾಗೂ ರೈತರಿಗೆ ಯಾವುದೆ ಯೋಜನೆಗಳೂ ಸರಿಯಾದ ರೀತಿಯಲ್ಲಿ ತಲುಪಿಲ್ಲ ಹಾಗೂ ರಾಜ್ಯದ ರೈತರು ಬರಗಾಲದಿಂದ ತತ್ತರಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಅಹಿಂದ ಜನಾಂಗ ಸಿದ್ದರಾಮಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಈಗಾಗಲೇ ಮೂರು ವರ್ಷಗಳ ಆಡಳಿತವನ್ನು ಪೂರೈಸಿದ್ದು, ಇದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೆ, ಅಧಿಕಾರದ ಅವಧಿ ಎರಡು ವರ್ಷಗಳು ಮಾತ್ರ ಉಳಿದಿದ್ದು, ಅದರಲ್ಲಿ ಒಂದು ವರ್ಷವನ್ನು ಹಾಗೂ ಹೀಗೂ ಪೂರೈಸಿ ಉಳಿದ ಮತ್ತೊಂದು ವರ್ಷ ಮುಂದಿನ ಚುನಾವಣೆಗೆ ರೂಪರೇಖೆಗಳನ್ನು ತಯಾರಿಸುವುದರಲ್ಲಿ ಕಳೆಯುತ್ತಾರೆ ಎನ್ನುವು ದರಲ್ಲಿ ಅನುಮಾನವಿಲ್ಲ.
ಭ್ರಷ್ಟಾಚಾರ ಕಡಿಮೆ
ಪ್ರೊ.ನರೇಂದ್ರ ನಾಯಕ್,
ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ

‘‘ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರಲ್ಲಿದ್ದ ನಾಸ್ತಿಕತೆ, ವೈಚಾರಿಕತೆಯ ಒಲವು ಆಡಳಿತದಲ್ಲೂ ಕಂಡು ಬರಬಹುದು ಅಂದು ಕೊಂಡೆ. ಆದರೆ ಅಂತಹುದೇನು ಬದಲಾವಣೆ ಕಂಡು ಬರಲಿಲ್ಲ.ಒಂದು ಮುಖ್ಯ ವಿಷಯ ಈ ಸರಕಾರ ಬಂದ ಬಳಿಕ ಯಡಿಯೂರಪ್ಪನವರ ಕಾಲದಲ್ಲಿ ನಡೆದ ಭ್ರಷ್ಟಾಚಾರದಂತಹ ಪ್ರಮುಖ ಹಗರಣಗಳು ಕಂಡು ಬಂದಿಲ್ಲ.ಮೂಢ ನಂಬಿಕೆ ವಿರುದ್ಧದ ಕಾಯ್ದೆ ತರುತ್ತೇವೆ ಎನ್ನುತ್ತಿದ್ದಾರೆ. ಮುಂದೆ ನೋಡಬೇಕು..’’
ಬಡವರ ಪರ ಯೋಜನೆಯಲ್ಲಿ ನಿಧಾನಗತಿ
ಕೆ.ಆರ್.ಶ್ರೀಯಾನ್,ಸಿಪಿಐ(ಎಂ) ರಾಜ್ಯಾಧ್ಯಕ್ಷರು, ಶಿಸ್ತುಪಾಲನ ಸಮಿತಿ

‘‘ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರಕಾರದ ಬಗ್ಗೆ ಜನಸಾಮಾನ್ಯರಿಗೆ ಹಲವು ನಿರೀಕ್ಷೆ ಗಳಿತ್ತು. ಆದರೆ ಈ ಸರಕಾರದಲ್ಲೂ ಆಂತರಿಕ ಗೊಂದಲದಿಂದ ಅಹಿಂದಾ ಮುಖಂಡ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯನವರಿಗೂ ತಮ್ಮ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವಂತೆ ಕಂಡು ಬರುತ್ತದೆ.ಬಡಜನರಿಗೆ ಅಕ್ಕಿ ಕೊಡುವ ಯೋಜನೆಯೆಲ್ಲಾ ಒಳ್ಳೆಯದೆ ಆದರೆ ಉಳಿದಂತೆ ಸಾಕಷ್ಟು ಯೋಜನೆಗಳು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ.ಕಾರ್ಮಿಕರಿಗೆ ಕನಿಷ್ಠ ಕೂಲಿ ಬಗ್ಗೆ, ಬರದ ಪರಿಸ್ಥಿತಿಯ ನಿಭಾವಣೆ ಬಗ್ಗೆ ನಿಧಾನ ಗತಿಯ ನಿರ್ಧಾರ ಕೈ ಗೊಳ್ಳಲಾಗುತ್ತಿದೆ.ಹಿಂದೆ ರಾಜ್ಯದಲ್ಲಿ ಅತಿವೃಷ್ಟಿಯಾದಾಗ ಬಿಜೆಪಿ ಸರಕಾರದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.ಅದೇ ರೀತಿ ಪ್ರಸಕ್ತ ಬರದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿ ಟೀಕೆಗೆ ಗುರಿಯಾಗಿದೆ.’’
ಅವಸರದ ನಿರ್ಧಾರ ಬೇಡ
ಬಿ.ಎ.ಮೊಯ್ದಿನ್ ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವರು

‘‘ರಾಜ್ಯಸರಕಾರ ಸದ್ಯದ ಪರಿಸ್ಥಿತಿಯಲ್ಲಿ ಕಳೆದ ಮೂರು ವರ್ಷದಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದೆ.ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದೆ ಎಂದು ನಾನು ಹೇಳುವುದಿಲ್ಲ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಆದರೂ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಿದ್ದರಾಮಯ್ಯ ಸರಕಾರ ಸಾಮಾಜಿಕ ನ್ಯಾಯ, ಪ್ರಗತಿಪರ ಧೋರಣೆಗಳೊಂದಿಗೆ ಆಡಳಿತ ನಡೆಸಲು ಆರಂಭಿಸಿತು. ಅವುಗಳಲ್ಲಿ ಸಾಕಷ್ಟು ಅನುಷ್ಠಾನವೂ ಆಗಿದೆ. ಆದರೆ ರಾಜ್ಯದಲ್ಲಿ ಮಾಡಬೇಕಾದ ಇನ್ನೂ ಸಾಕಷ್ಟು ಕೆಲಸಗಳು ಇವೆ. ಹಲವು ಕೆಲಸಗಳನ್ನು ಮಾಡಲು ಸಿದ್ದರಾಮಯ್ಯನವರಿಗೆ ಪೂರ್ಣಸಹಕಾರ ದೊರೆಯಲಿಲ್ಲ ಎನ್ನುವುದು ಕಂಡು ಬರುತ್ತದೆ. ಕೆಲವೊಂದು ಅವಸರದ ನಿರ್ಧಾರಗಳಿಂದ ಸರಕಾರ ಮುಜುಗರಕ್ಕೆ ಒಳಗಾಗ ಬೇಕಾಗದ ಸ್ಥಿತಿಯೂ ನಿರ್ಮಾಣ ವಾಯಿತು. ಸಿದ್ದರಾಮಯ್ಯನವರು ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ನಿರ್ಧಾರ ತೆಗೆದುಕೊಳ್ಳುವ ಮೊದಲೆ ಅನುಭವಿಗಳ ಸಲಹೆಗಳನ್ನು ಪಡೆದುಕೊಂಡರೆ ಒಳ್ಳೆಯದಿತ್ತು.ದೇವರಾಜ ಅರಸು ಅವರು ಮುಖ್ಯ ಮಂತ್ರಿಯಾಗಿದ್ದಾಗ ಅವರು ದಲಿತರ ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಾ ಹೋದಾಗ ಅವರನ್ನು ಅತ್ಯಂತ ಹೆಚ್ಚು ಭ್ರಷ್ಟ ಮುಖ್ಯ ಮಂತ್ರಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಅವರು ತಂದ ಭೂಸುಧಾರಣಾ ಮಸೂದೆ ಜಾರಿ ಯೋಜನೆ, ಸಾಲಮನ್ನಾ, ಹಿಂದುಳಿದವರ ಅಭಿವೃದ್ಧಿಗೆ ಹಮ್ಮಿಕೊಂಡ ಯೋಜನೆಗಳನ್ನು ಸಹಿಸದವರು ಅವರನ್ನು ಭ್ರಷ್ಟರೆಂದು ಟೀಕೆ ಮಾಡಲಾರಂಭಿಸಿದರು.ಅದೇ ರೀತಿ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡಲಾಗುತ್ತಿರುವಂತೆ ಕಾಣುತ್ತದೆ. ಮೊದಲು ಸಿದ್ದರಾಮಯ್ಯನವರ ವ್ಯಕ್ತಿತ್ವ ವನ್ನು ಗಮನಿಸಬೇಕು. ಅದನ್ನು ಒರೆಗೆ ಹಚ್ಚಬೇಕು. ರಾಜ್ಯದಲ್ಲಿರುವ ಭ್ರಷ್ಟಾಚಾರವನ್ನು ಒಮ್ಮೆಲೆ ಸಂಪೂರ್ಣ ಇಲ್ಲವಾಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜನ ಜಾಗೃತರಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸರಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಪ್ರಜ್ಞಾವಂತ ಮತದಾರರು ಭ್ರಷ್ಟರು ಆಯ್ಕೆಯಾಗುವುದನ್ನು ತಡೆಯಬೇಕಾಗಿದೆ’’
ಕೇಂದ್ರದ ಸಂಪನ್ಮೂಲಗಳು ಸಮರ್ಥ ಬಳಕೆಯಾಗಲಿ
ಯೋಗೀಶ್ ಭಟ್,
ಮಾಜಿ ವಿಧಾನಸಭಾ ಉಪಾಧ್ಯಕ್ಷ

‘‘ಆಡಳಿತಾತ್ಮಕ ವಿಚಾರಗಳಲ್ಲಿ ಸರಕಾರದ ವಿಳಂಬ ಧೋರಣೆ ಜನರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಕೇಂದ್ರದಿಂದ ದೊರಕುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವಲ್ಲಿಯೂ ರಾಜ್ಯ ಸರಕಾರ ವಿಫಲವಾಗಿದೆ.ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಈ ಸಂದರ್ಭದಲ್ಲಿ ತುಂಬೆಯ ಅರ್ಧದಲ್ಲಿರುವ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದ್ದರೆ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ದೊರೆಯುತ್ತಿತ್ತು. ತುಂಬೆ ಯ ಹೊಸ ಕಿಂಡಿ ಅಣೆ ಕಟ್ಟಿನ ಕಾಮಗಾರಿ ಎರಡು ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಾಗಿತ್ತು. ಕೇವಲ 6ತಿಂಗಳಲ್ಲಿ ಮಾಡಿ ಮುಗಿಸಬಹುದಾದ ಕಾಮಗಾರಿ ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ ಎನ್ನುವುದು ಇದಕ್ಕೊಂದು ಉದಾಹರಣೆ. ಅದೇ ರೀತಿ ಜಿಲ್ಲೆಯ ಪ್ಲಾನಿಟೋರಿಯಂ ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿಯನ್ನು ಸರಕಾರ ಸಮರ್ಪಕವಾಗಿ ನಿಭಾಯಿಸುತ್ತಿಲ್ಲ.ಸರಕಾರದ ಈ ರೀತಿಯ ವಿಳಂಬ ನೀತಿಯಿಂದ ರಾಜ್ಯದ ಜನತೆಗೆ ಸರಕಾರದ ಮೂರು ವರ್ಷಗಳ ಆಡಳಿತದಲ್ಲಿ ನಿರಾಸೆ, ಆಕ್ರೋಶ ಉಂಟಾಗಿದೆ’’
ಸಿದ್ದರಾಮಯ್ಯ ಅವರೇ ಸರಕಾರದ ವಿಶ್ವಾಸಾರ್ಹತೆ
ಎ. ಕೃಷ್ಣಯ್ಯ,ಉಪನ್ಯಾಸಕರು, ಶಿವಮೊಗ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಬಡವರಿಗೆ ಒಳಿತಾಗಿದೆ. ಅವರು ಬಡವರ ಪರವಾಗಿರುವ ಮುಖ್ಯಮಂತ್ರಿ ಎನ್ನುವುದರಲ್ಲಿ ಎರಡುಮಾತಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ಆದರೆ ಬಿಜೆಪಿಯೊಳಗಿದ್ದವರೇ ಯಡಿಯೂರಪ್ಪ ಅವರಿಗೆ ಸರಿಯಾದ ಆಡಳಿತ ನಡೆಸಲು ಅವಕಾಶ ಮಾಡಿ ಕೊಡಲಿಲ್ಲ. ಹಾಗೆಯೇ ಹಿಂದಿನ ಎಸ್. ಎಂ. ಕೃಷ್ಣ,, ಧರಂ ಸಿಂಗ್ ಅವರಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರು ಅತ್ಯುತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದೊಳಗಿರುವ ಇತರರು ಸಿದ್ದರಾಮಯ್ಯ ಅವರಿಗೆ ಸಹಕಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರಾಗಿ ಬರೇ ಶೋಕಿ ಮಾಡುವ ಕೆಲವರನ್ನು ಹೊರಗೆ ಹಾಕುವುದು ಅತ್ಯಗತ್ಯವಾಗಿದೆ.
ಎಸ್. ಎಂ. ಕೃಷ್ಣ ಅವರ ಇಂಗ್ಲಿಷ್ ಆಡಳಿತಕ್ಕಿಂತ ಸಿದ್ದರಾಮಯ್ಯ ನಮಗೆ ಹೆಚ್ಚು ಹತ್ತಿರವಾಗುತ್ತಾರೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ಕಾಂಗ್ರೆಸ್ ಮುಂದೆಯೂ ಒಂದಿಷ್ಟು ಜೀವ ಉಳಿಸಿಕೊಳ್ಳಬಹುದು. ಆದರೆ ಪಕ್ಷದ ಗುಂಪುಗಾರಿಕೆಯಿಂದಾಗಿ ಸಿದ್ದರಾಮಯ್ಯ ಇಳಿದದ್ದೇ ಆದರೆ, ಕಾಂಗ್ರೆಸ್‌ನ ಅಳಿದುಳಿದ ಭವಿಷ್ಯವೂ ನಾಶವಾಗುತ್ತದೆ. ಇಂದು ಇಡೀ ಸರಕಾರ ಸಿದ್ದರಾಮಯ್ಯ ಕಾರಣದಿಂದಲೇ ಒಂದಿಷ್ಟು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ.
ಸರಕಾರ ಸಾಧಿಸುವುದು ಇನ್ನೂ ಇದೆ. ಎರಡು ವರ್ಷಗಳಲ್ಲಿ ಅವುಗಳನ್ನೆಲ್ಲ ಈಡೇರಿಸುತ್ತಾರೆ ಎಂಬ ಭರವಸೆ ನನಗಿಲ್ಲ. ಆದರೂ, ಬಡವರ ವಿರುದ್ಧವಾಗಿ ನಿಷ್ಠುರ ಆಡಳಿತವನ್ನು ಅವರು ನೀಡಲಾರರು ಎನ್ನುವುದು ನನ್ನ ಭರವಸೆ.
ಸಚಿವರ ಮಧ್ಯೆ ಹೊಂದಾಣಿಕೆ ಇರಲಿ
ಮಾರುತಿ ಮಾನ್ಪಡೆ

ಪ್ರಾಂತ ರೈತ ಸಂಘದ ಅಧ್ಯಕ್ಷ ರೈತರ ಆತ್ಮಹತ್ಯೆ, ಬರ ಪರಿಸ್ಥಿತಿ ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಸೋತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರಕಾರ ಬಡವರಿಗೆ ಭೂ ಮಂಜೂರಾತಿ ಮಾಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಬರದಿಂದ ಸಂಕಷ್ಟದಲ್ಲಿರುವ ಜನರನ್ನು ಕಿತ್ತು ತಿನ್ನುವ ನೀರಿನ ಮಾಫಿಯಾ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿದೆ. ಕೇಂದ್ರ ಸರಕಾರಕ್ಕೂ ರಾಜ್ಯ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ, ಈ ಹಿಂದಿನ ಸಿದ್ದರಾಮಯ್ಯನವರಿಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಭಾರೀ ವ್ಯತ್ಯಾಸವಿದೆ. ಹೀಗಾಗಿ ಅವರಿಗೆ ಉತ್ತಮ ಆಡಳಿತ ನೀಡಲು ಸಾಧ್ಯ ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂಪುಟ ಸಚಿವರ ಮಧ್ಯೆದಲ್ಲಿಯೇ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಸಂಪುಟದಲ್ಲಿ ಹೊಂದಾಣಿಕೆ ತರಲು ಒಂದು ಉಪ ಸಮಿತಿ ರಚಿಸುವ ಮೂಲಕ ಉತ್ತಮ ಆಡಳಿತ ನೀಡಬೇಕು.
ಇನ್ನಷ್ಟು ಸ್ಪಂದನೆ ಅಗತ್ಯ
ಬಿ.ಟಿ.ವೆಂಕಟೇಶ್ ಹಿರಿಯ ವಕೀಲ

ಜನತೆಯ ನಿರೀಕ್ಷೆಯಂತೆ ಮೂರು ವರ್ಷ ರಾಜ್ಯ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಉಳಿದ ಎರಡು ವರ್ಷ ಜನತೆಯ ಆಶೋತ್ತರಗಳಿಗೆ ಇನ್ನಷ್ಟು ಸ್ಪಂದಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸರಕಾರ ಸಂಪೂರ್ಣ ಯಶಸ್ವಿಯಾಗಿಲ್ಲ. ಇನ್ನು ಮುಂದೆ ಹೀಗೆ ಆಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು.ರಾಜ್ಯದ ಜನತೆ ಬರ ಸ್ಥಿತಿಗೆ ಸಿಲುಕಿರುವ ಸಂದರ್ಭದಲ್ಲಿ ಸರಕಾರ ಸಾಂತ್ವನ ಹೇಳುವುದನ್ನು ಬಿಟ್ಟು ಬರ ನಿರ್ವಹಣೆಗೆ ಅಗತ್ಯ ಯೋಜನೆ ರೂಪಿಸಬೇಕು.
ಬರ ಪರಿಹಾರಕ್ಕೆ ಕೇಂದ್ರ ಸರಕಾರದ ಬಳಿ ಹಣ ಕೇಳುವುದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಮಾತ್ರವಲ್ಲ ನಾಯಕತ್ವ ವಹಿಸಿಕೊಂಡು ಕಷ್ಟದಲ್ಲಿರುವ ಜನರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಅಗತ್ಯ ಕ್ರಿಯಾಯೋಜನೆ ರೂಪಿಸಬೇಕು.
ಅಸಮರ್ಥ ಸಚಿವರನ್ನು ಹೊರಗಿಡಲಿ
ಪ್ರೊ.ಮುಮ್ತಾಝ್‌ಅಲಿಖಾನ್,ಮಾಜಿ ಸಚಿವ

ರಾಜಕಾರಣದಲ್ಲಿ ಪ್ರಾಮಾಣಿಕರು, ಶುದ್ಧಹಸ್ತರು ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಅರ್ಕಾವತಿ ಡಿನೋಟಿಫಿಕೇಷನ್, ದುಬಾರಿ ಕೈಗಡಿಯಾರ, ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಪುತ್ರನ ಕಂಪೆನಿಗೆ ಖಾಸಗಿ ಲ್ಯಾಬ್ ತೆರೆಯಲು ಟೆಂಡರ್ ಕೊಡಿಸಿದ್ದು, ಬರಪರಿಸ್ಥಿತಿ ನಿರ್ವಹಣೆಯಲ್ಲಿ ಎಡವಿದ್ದು ಸೇರಿದಂತೆ ಅನೇಕ ವೈಫಲ್ಯಗಳು ಅಂಟಿಕೊಂಡಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೆ ನಿರೀಕ್ಷಿತ ಸಾಧನೆಯನ್ನು ಮಾಡಿಲ್ಲ. ಆದುದರಿಂದ, ಇನ್ನೆರಡು ವರ್ಷಗಳ ಕಾಲ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಅನ್ನಭಾಗ್ಯ ಬಡವರ ಪಾಲಿಗೆ ದೌರ್ಭಾಗ್ಯವಾಗಿದೆ. ಅಸಮರ್ಥ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದವರು ಹೇಳುವುದಕ್ಕಿಂತ ಮುಂಚೆ ಅವರ ಪಕ್ಷದ ಶಾಸಕರೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಶಾಸಕಾಂಗದ ಮೇಲೆ ಮುಖ್ಯಮಂತ್ರಿಗೆ ಹಿಡಿತವಿಲ್ಲದಂತಾಗಿದೆ.
ಹಲವಾರು ಶಾಸಕರು, ಸಚಿವರ ಹೆಸರು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಕೇಳಿಬಂದಿದೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಅನುದಾನ ಬಿಡುಗಡೆ, ಖರ್ಚು ಮಾಡಲಾಗಿದೆ ಎಂಬುದರ ವಿವರವನ್ನು ಸಾರ್ವಜನಿಕ ವಾಗಿಡಲಿ.
ಉರ್ದು ಶಾಲೆಗಳ ಪರಿಸ್ಥಿತಿಯನ್ನು ಸುಧಾರಿಸಲು ಯಾವುದೆ ಕ್ರಮ ಕೈಗೊಂಡಿಲ್ಲ. ವಕ್ಫ್ ಆಸ್ತಿಗಳ ಸಂರಕ್ಷಣೆ ಮಾಡುವಲ್ಲಿ ವಿಫಲ. ಪಿಯುಸಿ ರಸಾಯನಶಾಸ್ತ್ರದ ಪ್ರಶ್ನೆ ಪತ್ರಿಕೆ ಸತತ ಎರಡು ಬಾರಿ ಸೋರಿಕೆಯಾಗಿದ್ದು, ಇವರ ಆಡಳಿತ ನಿರ್ವಹಣೆಗೆ ಸಾಕ್ಷಿ.
ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ
ಡಾ.ಎಂ.ಪಿ.ನಾಡಗೌಡ,ಜೆಡಿಯು ರಾಜ್ಯಾಧ್ಯಕ್ಷ

ಸಿಎಂ ಸಿದ್ದರಾಮಯ್ಯನವರಿಂದ ಜನಪರ ಆಡಳಿತದ ನಿರೀಕ್ಷೆ ಇತ್ತು. ಆದರೆ, ಸರಕಾರದ ಮೂರು ವರ್ಷದ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.
ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದ್ದು, ಸರಕಾರವನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯಲು ಇದೊಂದು ಒಳ್ಳೆಯ ಅವಕಾಶ. ಆದರೆ, ರಾಜ್ಯ ಸರಕಾರ ಬರ ಘೋಷಿಸಿದ ನಾಲ್ಕೈದು ತಿಂಗಳ ಬಳಿಕ ಬರ ಅಧ್ಯಯನಕ್ಕೆ ತೊಡಗಿದೆ. ಗುಳೆ ತಪ್ಪಿಸಲು ಸರಕಾರದ ಬಳಿ ಯೋಜನೆಗಳೇ ಇಲ್ಲ.
ರಾಜ್ಯ ಸರಕಾರದ ಆಡಳಿತದ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತೃಪ್ತಿಯಿಲ್ಲ. ಹೀಗಿರುವಾಗ ಜನತೆಗೆ ಒಳ್ಳೆಯ ಆಡಳಿತ ನೀಡಲು ಹೇಗೆ ಸಾಧ್ಯ. ಆರ್ಥಿಕ ಸದೃಢತೆ ದೃಷ್ಟಿಯಿಂದ ಉಳಿದ 2 ವರ್ಷಗಳ ಕಾಲ ಸರಕಾರ ಉತ್ತಮ ಆಡಳಿತ ನೀಡುವ ಮೂಲಕ ‘ಇದು ನಮ್ಮ ಸರಕಾರ’ ಎಂಬಂತೆ ಜನಾಭಿಪ್ರಾಯ ರೂಪಿಸಲಿ.
ಮುಖ್ಯಮಂತ್ರಿಯಾಗಿ ಮುಂದುವರಿಯಲಿ
ಎಚ್. ವಿ. ಅನಂತಸುಬ್ಬರಾವ್ ಕಾರ್ಮಿಕ ಮುಖಂಡ

ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಿದ್ದರಾಮಯ್�







