ಚಾಲಕ ಸೇರಿ ನಾಲ್ವರು ಕೂಲಿ ಕಾರ್ಮಿಕರ ಸಾವು
ಭೀಕರ ಅಪಘಾತ

ಬೆಂಗಳೂರು, ಮೇ 12: ರಸ್ತೆ ಬದಿ ನಿಂತಿದ್ದ ಲಾರಿಗೆ ಆಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕಲಬುರಗಿ ಮೂಲದ ಒಂದೆ ಕುಟುಂಬದ ಶಿವಪ್ಪ ಪೂಜಾರಿ(55), ಮಹದೇವಿ ಪೂಜಾರಿ(50) ಹಾಗೂ ಈ ದಂಪತಿಯ ಮಕ್ಕಳಾದ ಲಕ್ಕಮ್ಮ(9), ರಂಜಿತ(4) ಮತ್ತು ಆಟೊರಿಕ್ಷಾ ಚಾಲಕ ಶಂಕರಪ್ಪ(48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮರಿಯಪ್ಪ(18), ಲಿಂಗಣ್ಣ(17) ಹಾಗೂ ಜಯಲಕ್ಷ್ಮಿ(12) ಚಿಂತಾಜನಕ ಸ್ಥಿತಿಯಲ್ಲಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ 2:30ರ ಸಮಯದಲ್ಲಿ ನಗರದ ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿ ಈ ಅವಘಡ ನಡೆದಿದ್ದು, ಮೂಲತಃ ಕಲಬುರಗಿಯವರಾದ ಶಿವಪ್ಪಪೂಜಾರಿ ಹಾಗೂ ಮಹದೇವಿ ಪೂಜಾರಿ ತಮ್ಮ ಐವರು ಮಕ್ಕಳೊಂದಿಗೆ ಜೆ.ಸಿ.ನಗರದಲ್ಲಿ ವಾಸವಾಗಿದ್ದು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಕುಟುಂಬ ಸಮೇತ ಊರಿಗೆ ಹೋಗಿದ್ದ ದಂಪತಿ ಗುರುವಾರ ಮಧ್ಯಾಹ್ನ ನಗರಕ್ಕೆ ಹಿಂದಿರುಗಿದ್ದು, ಯಶವಂತಪುರ ರೈಲು ನಿಲ್ದಾಣದಿಂದ ಮನೆಗೆ ಹೋಗಲು ಆಟೊ ಹತ್ತಿದ್ದರು. ಆಟೊ ಜೆ.ಸಿ.ನಗರದ ಸಂದೀಪ್ ಬಾರ್ ಮುಂದೆ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದ್ದು ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಆಟೋ ಸಂಪೂರ್ಣ ಜಖಂಗೊಂಡಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಆಟೊ ಚಾಲಕ ಶಂಕರಪ್ಪಹಾಗೂ ಶಿವಪ್ಪ ಪೂಜಾರಿ ಕುಟುಂಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಒಂದೇ ಆಟೋದಲ್ಲಿ ಎಂಟು ಮಂದಿ ಪ್ರಯಾಣಿಸುತ್ತಿದ್ದುದರಿಂದ ಈ ಅವಘಡ ಸಂಭವಿಸಿದೆ, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







