ಚೈಲ್ಡ್‌ಲೈನ್‌ನಿಂದ ಬಾಲಕಿಯ ರಕ್ಷಣೆ
ಮಂಗಳೂರು, ಮೇ 12: ನಗರದ ತೊಕ್ಕೊಟ್ಟು ಬಬ್ಬುಕಟ್ಟೆ ಬಳಿಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ಬಾಲಕಿಯನ್ನು ಮಂಗಳೂರು-1098, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಮೂಲತಃ ಮಡಿಕೇರಿಯ 12 ವರ್ಷ ಪ್ರಾಯದ ಬಾಲಕಿಯು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈಕೆಯ ಹೆತ್ತವರು ಮಡಿಕೇರಿ ರಾಜಪೇಟೆಯ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ತೋಟದ ಮಾಲಕರ ಪುತ್ರ ಮಂಗಳೂರು ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅವರು ಬಬ್ಬುಕಟ್ಟೆಯಲ್ಲಿ ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇವರ ಮನೆ ಕೆಲಸಕ್ಕೆ ಮಡಿಕೇರಿಯಿಂದ ಈ ಬಾಲಕಿಯನ್ನು ಕರೆತರಲಾಗಿದೆ ಎಂದು ಹೇಳಲಾಗಿದೆ.
ಬಾಲಕಿಗೆ ಶಿಕ್ಷಣವನ್ನು ಮುಂದುವರಿಸುವ ಆಸಕ್ತಿ ಇದ್ದರೂ ಕುಟುಂಬದಲ್ಲಿ ಬಡತನವಿರುವ ಕಾರಣ ಶಾಲೆಯನ್ನು ಅರ್ಧದಲ್ಲಿ ಬಿಟ್ಟು, ಮನೆಕೆಲಸಕ್ಕೆ ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಇದೀಗ ಈ ಬಾಲಕಿಯನ್ನು ಶಾಲೆಯಿಂದ ಹೊರಗುಳಿದ ಮಗು ಎಂದು ಗುರುತಿಸಲಾಗಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ವತಿಯಿಂದ ನಡೆಯುತ್ತಿರುವ ‘ಶಾಲೆ ಕಡೆ, ನಮ್ಮ ನಡೆ’ ಎಂಬ ಆಂದೋಲನದ ಅಡಿಯಲ್ಲಿ ಮರಳಿ ಶಾಲೆಗೆ ದಾಖಲಿಸಲಾಗುವುದು ಹಾಗೂ ಈ ಮಾಹಿತಿಯನ್ನು ಶಿಕ್ಷಣ ಇಲಾಖೆ ಗಮನಕ್ಕೆ ತರಲಾಗುವುದು. ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಬಾಲಕಿಯ ರಕ್ಷಣಾ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿಗಳಾದ ಗಣಪತಿ ಹೆಗಡೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್‌ಲೈನ್‌ನ ಕೇಂದ್ರ ಸಂಯೋಜಕ ಸಂಪತ್ ಕಟ್ಟಿ ಮಾರ್ಗದರ್ಶನದಲ್ಲಿ ಚೈಲ್ಡ್‌ಲೈನ್‌ನ ರೇವತಿ ಹೊಸಬೆಟ್ಟು, ಜಯಂತಿ ಕೋಕಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಭವ್ಯಾ ಕುಮಾರ್ ಎಸ್., ಯಶೋಧಾ ಪೂಂಜಾಲಕಟ್ಟೆ, ವಾಹನ ಚಾಲಕರಾದ ಅಮರ್ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಪ್ರಮೀಳಾ ಎಚ್. ಪಾಲ್ಗೊಂಡಿದ್ದರು.





