ಮುಂಬೈ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶವಿರುವ ಸ್ಥಳದ ವರೆಗೆ ದೇಸಾಯಿ ಪ್ರವೇಶ
ಹೊಸದಿಲ್ಲಿ, ಮೇ 12: ಆರಾಧನಾ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನತೆ ಗಾಗಿ ಹೋರಾಡುತ್ತಿರುವ ಕಾರ್ಯಕರ್ತೆ ತೃಪ್ತಿ ದೇಸಾಯಿ, ಗುರುವಾರ ಪ್ರಬಲ ಭದ್ರತೆಯೊಂದಿಗೆ ಮುಂಬೈಯ ಹಾಜಿ ಅಲಿ ದರ್ಗಾ ಪ್ರವೇಶಿಸಿದ್ದಾರೆ. ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ಸ್ಥಾಪಕಿ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಮರಳಿದ್ದಾರೆಂದು ವರದಿಗಳು ತಿಳಿಸಿವೆ.
ಇದು ಆರಾಧನಾ ಸ್ಥಳಗಳಲ್ಲಿ ಪುರುಷ ಪ್ರಭುತ್ವ ಹಾಗೂ ಕೆಲವು ದೇವಳಗಳಲ್ಲಿ ಮಹಿಳೆಯರು ಪ್ರಧಾನ ಪೂಜಾ ಸ್ಥಳಕ್ಕೆ ಹೋಗದಂತೆ ನಿಷೇಧಿಸಿರುವ ನಿಯಮಗಳ ವಿರುದ್ಧ ಅವರ ಇತ್ತೀಚಿನ ಅಭಿಯಾನವಾಗಿದೆ.
ಇಂದು ತಾನು ಹಾಜಿ ಅಲಿ ದರ್ಗಾ ದೊಳಗೆ ಪ್ರವೇಶಿಸಿದ್ದೇನೆ. ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಮಹಿಳೆಯರಿಗೆ ಹೋಗಲು ಎಲ್ಲಿಯವರೆಗೆ ಅವಕಾಶ ವಿದೆಯೋ ಆ ಸ್ಥಳದವರೆಗೆ ತಾನು ಹೋಗಿದ್ದೇನೆಂದು ದೇಸಾಯಿ ಎಎನ್‌ಐಗೆ ತಿಳಿಸಿದರು.
2011ರ ಮುಂಚಿನಂತೆ, ಒಳಗಿನ ಏಕಾಂತ ಸ್ಥಳದ ವರೆಗೆ ಪ್ರವೇಶಕ್ಕೆ ಅವಕಾಶ ನೀಡಲೇ ಬೇಕೆಂದು ತಾನು ಪ್ರಾರ್ಥಿಸಿದೆನೆಂದು ಅವರು ಹೇಳಿದರು.
ದರ್ಗಾದಿಂದ ತೆರಳುವ ಮೊದಲು ದೇಸಾಯಿ, ಗಂಡಸರಿಗೆ ಹೋಗಲು ಅವಕಾಶ ಇರುವ ಸ್ಥಳದ ವರೆಗೆ ಹೆಂಗಸರಿಗೂ ಪ್ರವೇಶಿಸಲು ಅವಕಾಶ ನೀಡುವಂತೆ ದರ್ಗಾದ ಅಧಿಕಾರಿಗಳಿಗೆ ಮನವಿ ಮಾಡಿದರು.
ದರ್ಗಾದಲ್ಲಿ ತಮ್ಮನ್ನು ಎಲ್ಲಿಯವರೆಗೆ ಹೋಗಲು ಬಿಟ್ಟರು ಹಾಗೂ ಗಂಡಸರು ಎಲ್ಲಿಯವರೆಗೆ ಹೋಗುತ್ತಾರೆಂಬುದನ್ನು ತಾವು ಕಂಡೆವು. 15 ದಿನಗಳೊಳಗಾಗಿ ಟ್ರಸ್ಟಿಗಳು ಮಹಿಳೆಯರಿಗೆ ಒಳಗೆ ಹೋಗಲು ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ತಾವು ಪ್ರತಿಭಟನೆ ನಡೆಸಲಿದ್ದೇವೆಂದು ತೃಪ್ತಿ ಹೇಳಿದರೆಂದು ಎಎನ್‌ಐ ತಿಳಿಸಿದೆ.
ಪೀರ್ ಹಾಜಿ ಅಲಿ ಶಾ ಬುಖಾರಿ ಯವರ ಗೋರಿಯೊಳಗೆ ಹೋಗಿ ಚಾದರ ಅರ್ಪಿಸಲು ಮಹಿಳೆಯರಿಗೆ ಅವಕಾಶ ನೀಡಬೇಕೆಂದಿರುವ ದೇಸಾಯಿ, ಎಪ್ರಿಲ್‌ನಲ್ಲಿ ‘ಎಲ್ಲರಿಗೂ ಹಾಜಿ ಅಲಿ’ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಅವರು, ಬಾಲಿವುಡ್ ನಟರಾದ ಶಾರುಖ್‌ಖಾನ್, ಸಲ್ಮಾನ್ ಹಾಗೂ ಆಮಿರ್‌ಖಾನ್‌ರ ಬೆಂಬಲ ಕೋರಿದ್ದರು. ಆ ಮೂಲಕ ಅವರ ಅಭಿಮಾನಿ ಗಳು ತನ್ನ ಚಳವಳಿಯಲ್ಲಿ ಕೈ ಜೋಡಿಸ ಬಹುದೆಂದು ತೃಪ್ತಿ ನಂಬಿದ್ದರು.





