ಕೇರಳ ಚುನಾವಣೆ ಕರ್ತವ್ಯಕ್ಕೆ ಬಂದ ಬಿಎಸ್‌ಎಫ್ ಜವಾನರೊಳಗೆ ಜಗಳ: ಒಬ್ಬನ ಹತ್ಯೆ!

ಕೋಝಿಕ್ಕೋಡ್, ಪೆರುಂಬಾವೂರ್.ಮೇ 13: ವಡಗರದಲ್ಲಿ ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಬಿಎಸ್‌ಎಫ್ ಜವಾನನೊಬ್ಬ ಗುಂಡೇಟಿಗೀಡಾಗಿ ಸಾವನಪ್ಪಿದ್ದಾನೆಂದು ವರದಿಯಾಗಿದೆ. ಬಿಎಸ್‌ಎಫ್ ಇನ್ಸ್‌ಪೆಕ್ಟರ್ ರಾಂ ಗೋಪಾಲ್ ಮೀನ(44) ಗುಂಡೇಟಿಗೆ ಸಿಲುಕಿ ಮೃತರಾದ ವ್ಯಕ್ತಿ. ಇಲ್ಲಿನ ಇರಿಂಙಲ್ ಕೋಟ್ಟಕ್ಕಲ್ ಇಸ್ಲಾಮಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಿಎಸ್‌ಎಫ್ ಜವಾನರು ವಾಸವಿದ್ದ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ.
ಗುರುವಾರ ರಾತ್ರೆ ಹನ್ನೊಂದು ಗಂಟೆಗೆ ಘಟನೆ ನಡೆದಿದ್ದು. ಮಾತು ವಿವಾದವಾಗಿ ಜಗಳದ ಕಾರಣದಿಂದ ಸಹೊದ್ಯೋಗಿ ಹೆಡ್‌ಕಾನ್ಸ್‌ಟೇಬಲ್ ಉಮೇಶಪಾಲ್ ಸಿಂಗ್ ಗುಂಡಿಟ್ಟು ಮೀನಾರನ್ನು ಕೊಂದಿದ್ದಾನೆ. ರಜೆಯ ಕುರಿತ ಜಗಳ ಕೊಲೆಗೆ ಕಾರಣವಾಗಿತ್ತು ಎಂದು ಶಂಕಿಸಲಾಗಿದೆ. ನಾಲ್ಕು ಬಾರಿ ಗುಂಡು ಹಾರಾಟದ ಸದ್ದು ಕೇಳಿಸಿದೆ ಎಂದು ಊರಿನವರು ಹೇಳಿದ್ದಾರೆ. ಆನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು ಮೃತದೇಹವನ್ನು ವಡಗರ ಸರಕಾರಿ ಆಸ್ಪತ್ರೆಯ ಮೋರ್ಚರಿಯಲ್ಲಿ ಇರಿಸಲಾಗಿದೆ.
ಗುಂಡಿಟ್ಟುಕೊಂದ ಬಳಿಕ ಪರಾರಿಯಾಗಿರುವ ಉಮೇಶ್ ಪಾಲ್ ಸಿಂಗ್‌ರನ್ನು ಪೊಲೀಸರು ಹುಡುಕುತ್ತಿದ್ದಾರೆ. ಉತ್ತರಪ್ರದೇಶದ ನಿವಾಸಿಯಾಗಿರುವ ಉಮೇಶ್ ಪಾಲ್ ಸಿಂಗ್ ಕೇರಳದಿಂದ ತಪ್ಪಿಸಿಕೊಂಡಿರಬಹುದೇ ಎಂಬ ಸಂದೇಹವಿದೆ ಎಂದು ಡಿವೈಎಸ್ಪಿ ಪ್ರಜೀಶ್ ತೋಟ್ಟತ್ತಿಲ್ ಹೇಳಿದ್ದಾರೆ.





