ದ.ಕ. ಜಿಲ್ಲೆಯಲ್ಲಿ ಒಟ್ಟು 174.7 ಮಿ.ಮೀ. ಮಳೆ

ಮಂಗಳೂರು, ಮೇ 13: ದ.ಕ. ಜಿಲ್ಲಾದ್ಯಂತ ಗುರುವಾರ ಸಂಜೆಯಿಂದ ರಾತ್ರಿಯ ವೇಳೆಗೆ ಉತ್ತಮ ಮಳೆಯಾಗಿದ್ದು, ಮಾಪನ ಕೇಂದ್ರದಲ್ಲಿ ದಾಖಲಾಗಿರುವ ಪ್ರಕಾರ ಒಟ್ಟು 174.7 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ 46.1 ಮಿ.ಮೀ., ಬೆಳ್ತಂಗಡಿಯಲ್ಲಿ 30 ಮಿ.ಮೀ., ಮಂಗಳೂರು 21.3 ಮಿ.ಮೀ., ಪುತ್ತೂರಿನಲ್ಲಿ 19.8 ಮಿ.ಮೀ., ಸುಳ್ಯ 18.4 ಮಿ.ಮೀ., ಮೂಡುಬಿದಿರೆಯಲ್ಲಿ 18.4 ಮಿ.ಮೀ., ಕಡಬ 8 ಮಿ.ಮೀ., ಮುಲ್ಕಿ 12.7 ಮಿ.ಮೀ. ಮಳೆ ಬಿದ್ದಿದೆ. ಮೇ ತಿಂಗಳಲ್ಲಿ ಬಿದ್ದ ಅತೀ ಹೆಚ್ಚು ಮಳೆ ಇದಾಗಿದ್ದು, ಇದೇ ರೀತಿ ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಲಕ್ಷಣ ಇದೆ. ಇದರಿಂದ ತುಂಬೆ ಅಣೆಕಟ್ಟಿಗೆ ನೀರಿನ ಹರಿವು ಬರುವ ನಿರೀಕ್ಷೆಯಿದ್ದು, ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಲಕ್ಯಾ ಡ್ಯಾಂ ನೀರು ಕುಡಿಯಲು ಯೋಗ್ಯ
ಲಕ್ಯಾ ಡ್ಯಾಂನ ನೀರನ್ನು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಭಾಗದ ವಾರ್ಡ್‌ಗಳಿಗೆ ಪೂರೈಕೆ ಮಾಡಲು ಆರಂಭಿಸಲಾಗಿದೆ. ನೀರು ಕುಡಿಯಲು ಯೋಗ್ಯವಾಗಿದ್ದು, ಈ ಬಗ್ಗೆ ಈಗಾಗಲೇ ಪರೀಕ್ಷೆ ನಡೆಸಲಾಗಿದೆ. ಮಾತ್ರವಲ್ಲದೆ ತಾನೂ ಸೇರಿದಂತೆ ಅಧಿಕಾರಿಗಳು ನೀರನ್ನು ಸ್ವತಃ ಕುಡಿದು ಪರೀಕ್ಷಿಸಿರುವುದಾಗಿ ಜಿಲ್ಲಾಧಿಕಾರಿ ನೀರಿನ ಗುಣಮಟ್ಟದ ಬಗ್ಗೆ ಖಾತರಿ ವ್ಯಕ್ತಪಡಿಸಿದರು.







