ಮುಸ್ಲಿಂ ಧರ್ಮ ಗುರುವಿನ ಕ್ಷಮೆ ಕೋರಿದ ಬ್ರಿಟನ್ ಪ್ರಧಾನಿ
ಸುಲೈಮಾನ್ ಐಸಿಸ್ ಬೆಂಬಲಿಗ ಎಂದು ಕ್ಯಾಮರೂನ್ ಹೇಳಿದ್ದರು

ಲಂಡನ್, ಮೇ 13: ಬ್ರಿಟನ್‌ನ ಮುಸ್ಲಿಂ ಧರ್ಮಗುರು ಸುಲೈಮಾನ್ ಗನಿ ಐಸಿಸ್‌ಗೆ ಬೆಂಬಲ ನೀಡುತ್ತಾರೆ ಎಂಬುದಾಗಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಆರೋಪಿಸಿರುವುದಕ್ಕಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಕ್ಷಮೆ ಕೋರಿದ್ದಾರೆ. ತನ್ನ ಹೇಳಿಕೆಯಿಂದ ಉದ್ಭವಿಸಿರಬಹುದಾದ ‘‘ಯಾವುದೇ ತಪ್ಪು ತಿಳುವಳಿಕೆ’’ಗೆ ತಾನು ವಿಷಾದ ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಮೈಕಲ್ ಫಾಲನ್ ಇದೇ ವಿಷಯದಲ್ಲಿ ಸುಲೈಮಾನ್‌ರ ಕ್ಷಮೆ ಕೋರಿದ ಬಳಿ ತಾನೂ ಕ್ಷಮೆ ಕೋರಬೇಕಾದ ಅಗಾಧ ಒತ್ತಡಕ್ಕೆ ಪ್ರಧಾನಿ ಸಿಲುಕಿದ್ದರು. ಸುಲೈಮಾನ್ ಐಸಿಸ್‌ಗೆ ಬೆಂಬಲ ನೀಡುತ್ತಾರೆ ಎಂಬುದಾಗಿ ರಕ್ಷಣಾ ಕಾರ್ಯದರ್ಶಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಆರೋಪ ಮಾಡಿದ್ದರು. ಬಳಿಕ ಇದೇ ಆರೋಪವನ್ನು ಸದನದ ಹೊರಗೂ ಪುನರಾವರ್ತಿಸಿದ್ದರು. ಸಂಸತ್ತಿನ ಹೊರಗೆ ಮಾಡುವ ಆರೋಪಗಳಿಗೆ ಸಂಸತ್ತಿನ ಒಳಗೆ ಇರುವಂಥ ರಕ್ಷಣೆಗಳು ಸಿಗುವುದಿಲ್ಲ. ಹಾಗಾಗಿ, ರಕ್ಷಣಾ ಕಾರ್ಯದರ್ಶಿಯ ಸಂಸತ್ತಿನ ಹೊರಗಿನ ಹೇಳಿಕೆಯ ವಿರುದ್ಧ ಸುಲೈಮಾನ್ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಹೌಸ್ ಆಫ್ ಕಾಮನ್ಸ್‌ನಲ್ಲಿ ಎಪ್ರಿಲ್‌ನಲ್ಲಿ ನಡೆದ ಕಾವೇರಿದ ಚರ್ಚೆಯ ವೇಳೆ, ಸುಲೈಮಾನ್ ಗನಿ ‘‘ಐಸಿಸ್ ಬೆಂಬಲಿಗ’’ ಎಂಬುದಾಗಿ ಕ್ಯಾಮರೂನ್ ಆರೋಪಿಸಿದ್ದರು. ಲಂಡನ್ ಮೇಯರ್ ಅಭ್ಯರ್ಥಿ ಸಾದಿಖ್ ಖಾನ್ ಪದೇ ಪದೇ ಸುಲೈಮಾನ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ವೇಳೆ ಈ ಆರೋಪಗಳನ್ನು ಮಾಡಲಾಗಿತ್ತು.
ಬುಧವಾರ ರಾತ್ರಿ ಪ್ರಧಾನಿ ನಿವಾಸದ ವಕ್ತಾರರೋರ್ವರು ಈ ಹೇಳಿಕೆ ನೀಡಿದ್ದಾರೆ: ‘‘ಸುಲೈಮಾನ್ ಗನಿ ಬಗ್ಗೆ ಪ್ರಧಾನಿ ಹೇಳಿದ ಮಾತುಗಳ ವಿಚಾರದಲ್ಲಿ, ಸುಲೈಮಾನ್ ಐಸಿಸನ್ನು ಬೆಂಬಲಿಸುತ್ತಾರೆ ಎಂಬ ವರದಿಗಳನ್ನಷ್ಟೆ ಪ್ರಧಾನಿ ಉಲ್ಲೇಖಿಸಿದ್ದರು. ಇದರ ಅರ್ಥ ಸುಲೈಮಾನ್ ಐಸಿಸನ್ನು ಬೆಂಬಲಿಸುತ್ತಾರೆ ಎನ್ನುವುದಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ಪ್ರಧಾನಿ ಹೊಂದಿದ್ದಾರೆ ಹಾಗೂ ಅವರ ಹೇಳಿಕೆ ಯಾವುದಾದರೂ ತಪ್ಪು ತಿಳುವಳಿಕೆಗೆ ಕಾರಣವಾಗಿದ್ದರೆ ಸುಲೈಮಾನ್‌ರ ಕ್ಷಮೆ ಕೋರುತ್ತಾರೆ’’.







