ಜುಬೈಲ್: ಜೋಕಟ್ಟೆ ಏರಿಯಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನಿಂದ ‘ಗಮ್ಮತ್-2016’

ಜುಬೈಲ್ ಮೇ 13: ಅನಿವಾಸಿ ಜೋಕಟ್ಟೆ ನಿವಾಸಿಗಳ ಸಮುದಾಯ ಸಂಘಟನೆ ಜೋಕಟ್ಟೆ ಏರಿಯಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್(ಜೆಎಂಡಬ್ಲುಎ) ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ‘ಗಮ್ಮತ್-2016’ ಇಲ್ಲಿನ ಪೆಟೋಕೆಮ್ಯಾ ಬೀಚ್‌ನಲ್ಲಿ ಇತ್ತೀಚೆಗೆ ನಡೆಯಿತು.
ಜೋಕಟ್ಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಅವಕಾಶ ವಂಚಿತ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಎಂಬ ಪ್ರಮುಖ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮುಖ್ಯ ಭಾಷಣ ಮಾಡಿದ ಜೆಎಂಡಬ್ಲುಎ ಗೌರವಾಧ್ಯಕ್ಷ ಉದ್ಯಮಿ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಕಾರ್ಯಕ್ರಮದ ಆಯೋಜನೆಯ ಉದ್ದೇಶ ಮತ್ತು ಸಮುದಾಯ ಅಭ್ಯುದಯಕ್ಕಾಗಿ ಯಾವ ರೀತಿಯಲ್ಲಿ ಕಾರ್ಯಯೋಜನೆ ರೂಪಿಸುವುದು ಎಂಬುದರ ಬಗ್ಗೆ ವಿವರಿಸಿದರು.
ಇದೇ ಸಂದರ್ಭ ಸಮುದಾಯ ಅಭ್ಯುದಯಕ್ಕೆ ನೀಡುತ್ತಿರುವ ಸೇವೆಗಾಗಿ ಜೋಕಟ್ಟೆಯ ಹಿತೈಷಿಗಳಾದ ಝಕರಿಯಾ ಜೋಕಟ್ಟೆ, ಜುಬೈಲ್ ವೈಟ್ ಸ್ಟೋನ್‌ನ ಬಿ.ಎಂ.ಶರೀಫ್ ಹಾಗೂ ಅಬ್ದುಲ್ ಬಶೀರ್ ಬ್ಯಾರಿ ರಿಯಾದ್‌ರನ್ನು ಸನ್ಮಾನಿಸಲಾಯಿತು.
ಡಿಕೆಎಸ್‌ಸಿ ಜುಬೈಲ್ ಘಟಕದ ಅಧ್ಯಕ್ಷ ರಫೀಕ್ ಸೂರಿಂಜೆ, ಬಿಎಎಂಎ ದಮಾಮ್ ಇದರ ಅಧ್ಯಕ್ಷ ಹಮೀದ್ ಬಜ್ಪೆ, ಇಂಡಿಯನ್ ಸೋಶಿಯಲ್ ಫೋರಂನ ಈಸ್ಟನ್ ರೀಜನ್ ಕೇಂದ್ರ ಸಮಿತಿಯ ಅಧ್ಯಕ್ಷ ವಸೀಮ್ ಅಲಿ ರಬ್ಬಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೆಎಎಂಡಬ್ಲುಎ ದಮ್ಮಾಮ್-ಜುಬೈಲ್ ಘಟಕಾಧ್ಯಕ್ಷ ಅಬ್ದುರ್ರಹ್ಮಾನ್, ಉಪಾಧ್ಯಕ್ಷ ಎ.ಎಂ.ಆರಿಫ್, ರಿಯಾದ್ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್, ಮುಹಮ್ಮದ್ ಅಲ್ ಮುಝೈನ್, ಫಾದಿಲ್ ಅಲ್ ಮುಶೈರ್, ಶೈಕ್ ಎಕ್ಸ್‌ಪರ್ಟೈಸ್, ಅಬೂಬಕರ್ ರಾಯಿಸ್ಕೊ, ಹಬೀಬ್ ಕಲಾಯಿ, ಹಾತೀಮ್ ಕೂಳೂರು, ಫಾರೂಕ್ ಅರಬ್ ಎನರ್ಜಿಯಾ, ಆಸಿಫ್ ಡೀಲ್ಸ್ ಸೊಲ್ಯೂಶನ್, ಆಬಿದ್ ಮತ್ತಿತರರು ಉಪಸ್ಥಿತರಿದ್ದರು.
‘ಗಮ್ಮತ್-2016’ನಲ್ಲಿ ಸಾವಿರಾರು ಮಂದಿ ಅನಿವಾಸಿ ಕರ್ನಾಟಕ ಕರಾವಳಿಗರು ಭಾಗವಹಿಸಿದ್ದರು. ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಳೆನೀರು ಹರಾಜು ಮಾಡುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ಬಳಿಕ ಇಸ್ಲಾಮಿಕ್ ಹಾಡುಗಾರಿಕೆ, ದಫ್ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಇದರ ಸದಸ್ಯರು ನಡೆಸಿಕೊಟ್ಟರು.





