52 ರ 'ಯುವಕ', ದಂತಕತೆ ಮೈಕ್ ಪೊವೆಲ್ ಮತ್ತೆ ಒಲಿಂಪಿಕ್ಸ್ ಗೆ ?
#DaddyisGoingtoOlympics

ಬೆಂಗಳೂರು, ಮೇ 13: 8.95 ಮೀಟರ್ ಹಾರಿ ಅಮೇರಿಕದ ದಂತಕತೆ ಮೈಕ್ ಪೊವೆಲ್ ವಿಶ್ವ ದಾಖಲೆ ನಿರ್ಮಿಸಿ ಈಗ ಹೆಚ್ಚು ಕಡಿಮೆ ಕಾಲು ಶತಮಾನವೇ ಕಳೆದಿದೆ. ಆ ದಾಖಲೆ ಇವತ್ತಿಗೂ ಹಾಗೇ ಅವರ ಹೆಸರಲ್ಲೇ ಉಳಿದಿದೆ. ಈಗ ಅವರು ಇನ್ನೊಂದು ದಾಖಲೆ ಬರೆಯಲು ಹೊರಟಿದ್ದಾರೆ.
ಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್ ನ ಬ್ರ್ಯಾಂಡ್ ರಾಯಭಾರಿ ಆಗಿ ಬೆಂಗಳೂರಿಗೆ ಬಂದ ಪೊವೆಲ್ ಪ್ರಮುಖ ಘೋಷಣೆಯೊಂದನ್ನು ಮಾಡಿದ್ದಾರೆ. ಈಗ 52 ವರ್ಷ ವಯಸ್ಸಾಗಿರುವ ಈ ಅದ್ಭುತ ಅಥ್ಲೀಟ್ 2016 ರ ರಿಯೊ ಒಲಿಂಪಿಕ್ ಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ !
ಈ ಬಗ್ಗೆ ಅವರು ಹೇಳಿದ್ದಿಷ್ಟು : " ನನಗೆ ಪೂರ್ಣ ವಿಶ್ವಾಸವಿದೆ. 8.05 ಮೀಟರ್ ಹಾರಲು ನನಗೆ ಮರೆತು ಹೋಗುವ ಸಾಧ್ಯತೆ ಇಲ್ಲ. ನಾನು ಈಗ 8.30 ಮೀಟರ್ ಹಾರಬಲ್ಲೆ ಎಂದು ನನಗೆ ವಿಶ್ವಾಸವಿದೆ. ಅದನ್ನು ಹೇಗೆ ಸಾಧಿಸಬೇಕೆಂದು ನನಗೆ ಗೊತ್ತಿದೆ. ಅಷ್ಟು ಹಾರಿದರೆ ನಾನು ಒಲಿಂಪಿಕ್ ಪದಕಕ್ಕೆ ಅರ್ಹನಾಗುತ್ತೇನೆ. ನನ್ನನ್ನು ಸೋಲಿಸುವ ಮೂರು ಮಂದಿ ಯಾವ ಕೂಟದಲ್ಲೂ ಬರಲು ಸಾಧ್ಯವಿಲ್ಲ. ನಾನು ಲಾಂಗ್ ಜಂಪ್ ಕ್ಷೇತ್ರದ ಬಿಥೋವನ್ ಇದ್ದಂತೆ . ನನ್ನ ಮೇಲೆ ನಿಮಗೆ ಇನ್ನೂ ಸಂಶಯ ಇದ್ದರೆ " ನೀವು ನೋಡಿ " ಎಂದಷ್ಟೇ ಹೇಳುತ್ತೇನೆ. ನಾನು ಒಲಿಂಪಿಕ್ ತಂಡ ಸೇರಲಿದ್ದೇನೆ. ಏಕೆಂದರೆ " ನಿಮ್ಮ ತಂದೆ ಒಲಿಂಪಿಕ್ ಗೆ ಹೋಗುತ್ತಾರೆ ಎಂದು ನಾನ್ನು ನನ್ನ ಮಗಳಿಗೆ ಹೇಳಿ ಆಗಿದೆ. ಅದೇ ನನ್ನ ಪಾಲಿಗೆ ಬಹುದೊಡ್ಡ ಉತ್ತೇಜನ "







