ಟ್ರಂಪ್ ಅಮೇರಿಕದ ಅಧ್ಯಕ್ಷರಾಗುವುದಿಲ್ಲ : ಜಾರ್ಜ್ ಕ್ಲೂನಿ
" ನಮಗೆ ಮುಸ್ಲಿಮರ ಬಗ್ಗೆ ಭಯವಿಲ್ಲ " ಎಂದ ಹಾಲಿವುಡ್ ಸೂಪರ್ ಸ್ಟಾರ್

ಕೇನ್ಸ್ (ಫ್ರಾನ್ಸ್), ಮೇ 13: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲ್ಲುವುದಿಲ್ಲ ಎಂದು ಹಾಲಿವುಡ್ ನಟ ಜಾರ್ಜ್ ಕ್ಲೂನಿ ಭವಿಷ್ಯ ನುಡಿದಿದ್ದಾರೆ. ಇಲ್ಲಿ ನಡೆಯುತ್ತಿರುವ ಕೇನ್ಸ್ ಚಿತ್ರೋತ್ಸವದಲ್ಲಿ ಗುರುವಾರ ತನ್ನ ಚಿತ್ರ ‘ಮನಿ ಮಾನ್ಸ್‌ಟರ್’ನ ಪ್ರದರ್ಶನದ ಬಳಿಕ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭವಿಷ್ಯ ನುಡಿದಿದ್ದಾರೆ.
‘‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಕರೆಯುವಂಥ ಪರಿಸ್ಥಿತಿ ಉದ್ಭವಿಸುವುದಿಲ್ಲ’’ ಎಂದು ಆತ್ಮವಿಶ್ವಾಸದಿಂದ ತುಂಬಿದ ಧ್ವನಿಯಲ್ಲಿ ಅವರು ಹೇಳಿಕೊಂಡರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿಜಯಿಯಾದರೆ ಮುಂದೇನು ಎಂಬ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು. ‘‘ನಮ್ಮ ದೇಶ ಯಾವುದೇ ಹೆದರಿಕೆಯನ್ನು ಎದುರಿಸುತ್ತಿಲ್ಲ. ನಮಗೆ ಮುಸ್ಲಿಮರು ಅಥವಾ ವಲಸಿಗರು ಅಥವಾ ಮಹಿಳೆಯರ ಹೆದರಿಕೆಯಿಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ’’ ಎಂದರು.
ತನ್ನ ಚೇತೋಹಾರಿ ಪತ್ರಿಕಾಗೋಷ್ಠಿಯಲ್ಲಿ ಕ್ಲೂನಿ ಕೇಬಲ್ ನ್ಯೂಸ್ ನೆಟ್‌ವರ್ಕ್‌ಗಳ ವಿರುದ್ಧ ಹರಿಹಾಯ್ದರು. ಟ್ರಂಪ್ ಈಗ ಎಲ್ಲಿದ್ದಾರೋ ಅದಕ್ಕೆ ಕಾರಣ ಈ ಕೇಬಲ್ ನ್ಯೂಸ್ ನೆಟ್‌ವರ್ಕ್‌ಗಳು, ಅವುಗಳು ತಮ್ಮ ಸುದ್ದಿಗಳನ್ನು ಮಾಹಿತಿ-ಮನರಂಜನೆ ರೂಪದಲ್ಲಿ ನೀಡಿದವು ಎಂದರು.
‘‘ಕಠಿಣ ಪ್ರಶ್ನೆಗಳನ್ನು ಕೇಳದ ಟಿವಿ ಸುದ್ದಿ ಕಾರ್ಯಕ್ರಮಗಳ ಫಲಿತಾಂಶವೇ ಟ್ರಂಪ್. ಖಾಲಿ ವೇದಿಕೆಯೊಂದನ್ನು ತೋರಿಸಿ, ‘‘ಡೊನಾಲ್ಡ್ ಟ್ರಂಪ್ ಇಲ್ಲಿ ಮಾತನಾಡಲಿದ್ದಾರೆ’’ ಎಂಬ ವಿವರಣೆಯೊಂದನ್ನು ನೀಡಿದರೆ ಅವುಗಳ ರೇಟಿಂಗ್ ಮೇಲೇರುತ್ತದೆ’’ ಎಂದರು.







