ಅಮೆರಿಕದ ಕೋಳಿ ಉದ್ಯಮದಲ್ಲಿ ಕಾರ್ಮಿಕರು ಶೌಚಾಲಯಕ್ಕೂ ಹೋಗುವಂತಿಲ್ಲ
ಡೈಪರ್‌ಗಳನ್ನು ಹಾಕಿಕೊಳ್ಳುವಂತೆ ಒತ್ತಡ: ಕಾರ್ಮಿಕರ ಆರೋಪ

ಲಾಸ್ ಏಂಜಲಿಸ್, ಮೇ 13: ಅಮೆರಿಕದ ಕೋಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಶೌಚಾಲಯಕ್ಕೆ ಹೋಗಲೂ ಅನುಮತಿ ನೀಡಲಾಗುತ್ತಿಲ್ಲ ಹಾಗೂ ಅಲ್ಲಿನ ಕಾರ್ಮಿಕರಿಗೆ ಪರಿಸ್ಥಿತಿ ಎಷ್ಟರಮಟ್ಟಿಗೆ ಕಠಿಣವಾಗಿದೆಯೆಂದರೆ, ಅವರನ್ನು ಡಯಾಪರ್ (ಸೋರಿಕೆಯಾಗದ ಭದ್ರ ಒಳ ಉಡುಪು) ಹಾಕುವಂತೆ ಒತ್ತಾಯಿಸಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.
ಈ ಉದ್ಯಮದಲ್ಲಿ ಕೆಲಸ ಮಾಡುವ 2.5 ಲಕ್ಷ ಕಾರ್ಮಿಕರ ಪೈಕಿ ಹೆಚ್ಚಿನವರನ್ನು ಉಪೇಕ್ಷಿಸಲಾಗುತ್ತಿದೆ, ಅಪಹಾಸ್ಯ ಮಾಡಲಾಗುತ್ತಿದೆ ಹಾಗೂ ಶೌಚಾಲಯಕ್ಕೆ ಹೋಗಬೇಕೆಂದು ಕೇಳಿದರೆ ಕೆಲಸದಿಂದ ವಜಾ ಮಾಡುವ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂದು 'ಆಕ್ಸ್‌ಫಾಮ್ ಅಮೆರಿಕ' ಅಧ್ಯಯನವೊಂದರಲ್ಲಿ ಹೇಳಿದೆ.
''ಈ ಮೂಲಭೂತ ಮಾನವ ಅವಶ್ಯಕತೆಯ ನಿರಾಕರಣೆಯೊಂದಿಗೆ ಹೊಂದಿಕೊಳ್ಳಲು ಕಾರ್ಮಿಕರು ಹೆಣಗುತ್ತಿದ್ದಾರೆ. ಕೆಲಸ ನಿರತವಾಗಿರುವಾಗಲೇ ಅವರು ಮಲ, ಮೂತ್ರ ವಿಸರ್ಜಿಸುತ್ತಾರೆ. ಕೆಲಸ ಮಾಡುವಾಗ ಅವರು ಡಯಾಪರ್‌ಗಳನ್ನು ಧರಿಸುತ್ತಾರೆ'' ಎಂದು ಮಂಗಳವಾರ ಬಿಡುಗಡೆಯಾದ ವರದಿ ತಿಳಿಸಿದೆ.
ಅಲ್ಲಿನ ಕೆಲಸಗಾರರು ಅಪಾಯಕಾರಿಯೆನಿಸುವಷ್ಟು ಕಡಿಮೆ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಕುಡಿಯುತ್ತಾರೆ, ವೇದನೆ ಮತ್ತು ಅಹಿತವನ್ನು ಸಹಿಸಿಕೊಳ್ಳುತ್ತಾರೆ ಎಂದು ಜಾಗತಿಕ ಬಡತನ ನಿಗ್ರಹ ದತ್ತಿ ಸಂಸ್ಥೆಯ ಅಮೆರಿಕ ಘಟಕ ಹೇಳಿದೆ.
ತಾರತಮ್ಯ ವಿರೋಧಿ 'ಸದರ್ನ್ ಪವರ್ಟಿ ಲಾ ಸೆಂಟರ್' ಈ ಅಧ್ಯಯನವನ್ನು ನಡೆಸಿದೆ. ಅದು ಅಲಬಾಮದಲ್ಲಿ 266 ಕಾರ್ಮಿಕರನ್ನು ಸಂದರ್ಶಿಸಿದೆ ಎಂದು ಆಕ್ಸ್‌ಫಾಮ್ ಹೇಳಿದೆ.
''ಅಗತ್ಯವಿದ್ದಾಗ ಶೌಚಾಲಯಕ್ಕೆ ಹೋಗಲು ತಮಗೆ ಅನುಮತಿ ನೀಡುವುದಿಲ್ಲ ಎಂದು ಅವರ ಪೈಕಿ ಸುಮಾರು 80 ಶೇಕಡ ಹೇಳಿದ್ದಾರೆ'' ಎಂದು ಅದು ಹೇಳಿದೆ.
''ತಮಗೆ ವಾರಕ್ಕೆ ಎರಡಕ್ಕಿಂತಲೂ ಕಡಿಮೆ ಅವಧಿಯ ಶೌಚಾಲಯ ವಿರಾಮವನ್ನು ನೀಡಲಾಗುತ್ತಿದೆ ಎಂದು ಮಿನಸೋಟದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯ ವೇಳೆ ಸಂದರ್ಶನಕ್ಕೊಳಗಾದ 86 ಶೇಕಡ ಮಂದಿ ಹೇಳಿದ್ದಾರೆ'' ಎಂದು ಆಕ್ಸ್‌ಫಾಮ್ ತಿಳಿಸಿದೆ.
ಕೆಲಸ ನಡೆಯುತ್ತಿರುವಾಗ ಶೌಚಾಲಯಕ್ಕೆ ಹೋಗಲು ಕಾರ್ಮಿಕರಿಗೆ ಸೂಪರ್‌ವೈಸರ್‌ಗಳು ಅನುಮತಿ ನೀಡುತ್ತಿಲ್ಲ. ದೈನಂದಿನ ಕೋಟವನ್ನು ಪೂರೈಸಬೇಕಾದ ಅಗಾಧ ಒತ್ತಡದಲ್ಲಿ ಅವರಿರುತ್ತಾರೆ'' ಎಂದು ವರದಿ ಹೇಳಿದೆ.





