ಮರವೂರು: ಅಕ್ರಮ ಮರಳು ಸಾಗಾಟ ತಡೆಗಟ್ಟಲು ತಡೆಗಂಬ ನಿರ್ಮಾಣ

ಮಂಗಳೂರು, ಮೇ 13: ಕೆಂಜಾರು ಗ್ರಾಮದ ಮರವೂರು ಸೇತುವೆಯ ಬಳಿ ಘನವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಇಂದು ಮರವೂರು ಗ್ರಾಮ ಪಂಚಾಯತ್‌ನಿಂದ ಘನವಾಹನಗಳು ಸಾಗದಂತೆ ಎರಡು ಕಂಬಗಳನ್ನು ನಿರ್ಮಿಸಲಾಯಿತು.
ಕಳೆದ ವಾರ ಇದೇ ಜಾಗದಲ್ಲಿ ಘನವಾಹನಗಳು ಸಾಗದಂತೆ ಗೇಟ್ ನಿರ್ಮಿಸಲು ಮುಂದಾದಾಗ ಘನವಾಹನಗಳಲ್ಲಿ ಅಕ್ರಮ ಮರಳುಗಾರಿಕೆ ಮಾಡುವ ವ್ಯಾಪಾರಿಗಳು ತಡೆಯೊಡ್ಡಿದ್ದರು. ಇದೀಗ ಮರವೂರು ಗ್ರಾಮ ಪಂಚಾಯತ್ ಪೊಲೀಸರ ರಕ್ಷಣೆಯನ್ನು ಪಡೆದುಕೊಂಡು ಇಂದು ಮರವೂರು ಸೇತುವೆಯ ಬಳಿ ಘನವಾಹನ ಸಾಗದಂತೆ ಕಂಬಗಳನ್ನು ನಿರ್ಮಿಸಿದರು.
ಮುಂಜಾನೆಯೆ ಗ್ರಾಮಪಂಚಾಯತ್‌ನಿಂದ ಕಾಮಗಾರಿಗಾಗಿ ಕಾರ್ಮಿಕರು ಬಂದಿದ್ದರೂ ಅಕ್ರಮ ಮರಳು ಸಾಗಾಣೆ ಮಾಡುವವರು ಕಾಮಗಾರಿ ಮಾಡದಂತೆ ಇಂದು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯಾಹ್ನದ ನಂತರ ಪೊಲೀಸರ ರಕ್ಷಣೆಯೊಂದಿಗೆ ಕಂಬಗಳನ್ನು ಅಳವಡಿಸಲಾಯಿತು.
ಇದೇ ಸಂದರ್ಭದಲ್ಲಿ ಮೇಲ್ಬಾಗದಲ್ಲಿ ಅಡ್ಡಲಾಗಿ ಕಂಬ ನಿರ್ಮಿಸಲು ಆರ್‌ಟಿಒ ಅನುಮತಿ ಅಗತ್ಯವಿರುವುದರಿಂದ ಆರ್‌ಟಿಒ ಅನುಮತಿ ಪಡೆದುಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.







