70 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಡಿಸಿ ಷಡಕ್ಷರಿಸ್ವಾಮಿ

ತರೀಕೆರೆ, ಮೇ 13 ಪಟ್ಟಣದ ಬಯಲು ರಂಗ ಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿ ಸಲಾಗಿದ್ದ ಜಿಲ್ಲಾ ಮಟ್ಟದ ಭಗೀರಥ ಜಯಂತಿಯನ್ನು ಜಿಲ್ಲಾಧಿಕಾರಿ ಎಸ್. ಪಿ.ಷಡಕ್ಷರಿಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ 60 ರಿಂದ 70 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ನಡೆಸಿ ನೀರಿನ ಸಂಗ್ರಹವನ್ನು ಹೆಚ್ಚುಗೊಳಿಸಲು ಯೋಜನೆ ರೂಪಿಸಲಾಗಿದೆ. ಅಂತರ್ಜಲ ವೃದ್ಧಿಗೊಳಿಸುವ ಯೋಜನೆ ಇದಾಗಿದ್ದು, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರು ಹೂಳೆತ್ತಲು ಸಹಕರಿಸಬೇಕು. ನೀರನ್ನು ಮಿತವಾಗಿ ಬಳಸಬೇಕು ಎಂದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಸರಕಾರ ಸಣ್ಣ ಸಮುದಾಯಗಳನ್ನು ಗುರುತಿಸಿ ಮನ್ನಣೆ ನೀಡಿದೆ. ಸರಕಾರ ಜಾತಿ ಸಮೀಕ್ಷೆ ನಡೆಸುವ ಮೂಲಕ ಅವರ ಸ್ಥಿತಿಗತಿಗಳ ಅಧ್ಯಯನ ನಡೆಸಲಿದೆ. ತಾಲೂಕಿನ ನಂದೀಪುರ, ಮುಗಳಿ ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ. ನಾರಣಾಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು 10 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದ ಅವರು, ತುರ್ತಾಗಿ 2.50 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ಜಾಗದ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ತುರ್ತಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಪುರಸಭಾಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಸಿಎಂ ಬಳಿ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು. ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಕೆ.ಜಿ.ರಾಧಾ, ಪುರಸಭೆ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ, ಉಪ ವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಮಹೇಶ್ಚಂದ್ರ, ಇಒ ಗಂಗಾಧರಮೂರ್ತಿ, ಬಿಇಒ ಹರಿಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ರಾಮಚಂದ್ರಪ್ಪ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಟಿ.ಬಿ.ಶಿವಣ್ಣ ಉಪಸ್ಥಿತರಿದ್ದರು.







