‘ಕಿಡ್ನಿ ಸ್ಟೋನ್’ ಸಮಸ್ಯೆಗೆ ತುತ್ತಾಗುತ್ತಿರುವ ಶಾಂತಿಗೆರೆ ಗ್ರಾಮಸ್ಥರು
ಕುಡಿಯುವ ನೀರು ಪ್ರಯೋಗಾಲಯಕ್ಕೆ ರವಾನೆ
ಶಿವಮೊಗ್ಗ, ಮೇ 13: ಜಿಲ್ಲೆಯ ಸೊರಬ ತಾಲೂಕಿನ ಅಂಡಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಗೆರೆ ಗ್ರಾಮದ ಗ್ರಾಮಸ್ಥರು ಸಾಲುಸಾಲಾಗಿ ‘ಕಿಡ್ನಿ ಸ್ಟೋನ್’ ಸಮಸ್ಯೆಗೆ ತುತ್ತಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಅಂಡಿಗೆರೆ ಗ್ರಾಪಂ ಅಧ್ಯಕ್ಷರು ಕೂಡ ‘ಕಿಡ್ನಿ ಸ್ಟೋನ್’ಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಿಡ್ನಿ ಸ್ಟೋನ್‌ಗೆ ಬೋರ್‌ವೆಲ್‌ನಿಂದ ಪೂರೈಕೆಯಾಗುತ್ತಿರುವ ಲವಣಾಂಶಯುಕ್ತ ಕುಡಿಯುವ ನೀರು ಕಾರಣವಾಗಿದೆ ಎಂಬುದು ಸ್ಥಳೀಯ ನಾಗರಿಕರ ಆತಂಕವಾಗಿದೆ. ಈ ನಡುವೆ ಕುಡಿಯಲು ಪೂರೈಕೆ ಮಾಡುತ್ತಿರುವ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಪರಿಶೀಲನೆ ನಡೆಸಲು ಸ್ಥಳೀಯ ಅಂಡಿಗೆರೆ ಗ್ರಾಪಂ ಆಡಳಿತ ಮುಂದಾಗಿದೆ. ಬೋರ್‌ವೆಲ್ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಪ್ರಯೋಗಾಲಯದ ವರದಿ ಬಂದ ನಂತರ ನೀರಿನ ಗುಣಮಟ್ಟದ ಬಗ್ಗೆ ತಿಳಿದುಬರಬೇಕಾಗಿದೆ ಎಂದು ಅಂಡಿಗೆರೆ ಗ್ರಾಪಂ ಅಧ್ಯಕ್ಷ ಹೇಮಚಂದ್ರರವರು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದ ನಿವಾಸಿ ಉಮೇಶ್ ಎಂಬವರು ಮಾತನಾಡಿ, ಸುಮಾರು 10 ರಿಂದ 15 ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಿವಮೊಗ್ಗ, ಸಾಗರ ಮೊದಲಾದೆಡೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದಾರೆ. ತಮಗೂ ಕೂಡ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಪರೀಕ್ಷಿಸಿದ ವೈದ್ಯರು ಕುಡಿಯುವ ನೀರಿನ ಕಾರಣದಿಂದ ಕಿಡ್ನಿಯಲ್ಲಿ ಕಲ್ಲಾಗಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳುತ್ತಾರೆ.
ಪ್ರಸ್ತುತ ಶಾಂತಿಗೆರೆ ಗ್ರಾಮಕ್ಕೆ ಬೋರ್‌ವೆಲ್ ನೀರು ಪ್ರಮುಖ ಕುಡಿಯುವ ನೀರಿನ ಮೂಲವಾಗಿದೆ. ಈ ನೀರು ಸೇವೆಯಿಂದಲೇ ಗ್ರಾಮಸ್ಥರಲ್ಲಿ ಕಿಡ್ನಿಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳಲು ಮುಖ್ಯ ಕಾರಣವಾಗಿದೆಯೇ ಎಂಬುದು ಪ್ರಯೋಗಾಲಯದ ಪರೀಕ್ಷೆಯ ನಂತರ ಸ್ಪಷ್ಟವಾಗಬೇಕಾಗಿದೆ. ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲವಾಗಿದೆ ಎಂದು ಸೊರಬ ತಾಲೂಕು ಆಡಳಿತದ ಮೂಲಗಳು ಹೇಳುತ್ತವೆ.





