ಸೊರಬ: ಸಿಡಿಲು ಬಡಿದು ಓರ್ವ ಸಾವು; ನಾಲ್ವರು ಗಂಭೀರ

ಸೊರಬ, ಮೇ 13: ಪಟ್ಟಣ ಸೇರಿದಂತೆ ತಾಲೂಕಿನ ಹಲವಡೆ ಗುರುವಾರ ಸಂಜೆ ಸಾಧಾರಣ ಪ್ರಮಾಣದ ಮಳೆಯಾಯಿತು. ಈ ವೇಳೆ ಗುಡುಗು-ಸಿಡಿಲಿನಿಂದ ಕೂಡಿದ ಗಾಳಿಯ ಆರ್ಭಟ ಕೆಲವು ಅನಾಹುತಗಳನ್ನು ಸೃಷ್ಟಿಸುವ ಜೊತೆಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಒಬ್ಬರು ಬಲಿಯಾಗಿದ್ದು ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕುಳವಳ್ಳಿ ಗ್ರಾಮದಲ್ಲಿ ನಡೆದಿದೆ ಓಂಕಾರಪ್ಪ ಮಲ್ಲಾಡ್(46) ಸಿಡಿಲಿಗೆ ಬಿಲಿಯಾದ ದುರ್ಧೈವಿ. ಧರ್ಮಪ್ಪಎಂಬವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಬಡಿದ ಸಿಡಿಲಿಗೆ ಓಂಕಾರಪ್ಪ ಮಲ್ಲಾಡ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಧರ್ಮಪ್ಪ(56) ಹಾಗೂ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ ಪ್ರಭು (16) ತೀವ್ರಗಾಯಗೊಂಡಿದ್ದಾರೆ. ಮೃತ ಓಂಕಾರಪ್ಪ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಪರಿಹಾರದ ಚೆಕ್ ವಿತರಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕುಂಬತ್ತಿ ಗ್ರಾಮದಲ್ಲಿ ಸಿಡಿಲಿಗೆ ಇಂದೂಧರ (38) ಹಾಗೂ ಬಿದರಗೇರಿ ಗ್ರಾಮದಲ್ಲಿ ಹನುಮಂತಪ್ಪ (58) ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಗಾಯಾಳುಗಳು ಸೊರಬ ಹಾಗೂ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಸಿಡಿಲಿಗೆ ಶ್ರೀಧರ್ ಎಂಬವರ ಮನೆಯೊಂದು ಜಖಂ ಗೊಂಡಿದೆ. ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಬಿರುಸಿನ ಗಾಳಿಗೆ ಶೇಷಗಿರಿ ಕಾತ್ಲೆ ಎಂಬವರ ಮನೆಯ ಸಮೀಪ ಮರವೊಂದು ಕೊಟ್ಟಿಗೆ ಮೇಲೆ ಬಿದ್ದ ಪರಿಣಾಮ, ಕೊಟ್ಟಿಗೆಯಲ್ಲಿದ್ದ ಎಮ್ಮೆ ಕರುವೊಂದು ಅಸುನೀಗಿದೆ. ಒಟ್ಟಾರೆ ತಾಲೂಕಿನಲ್ಲಿ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಕೆಲವು ಮನೆಗಳ ಹೆಂಚುಗಳು ಹಾರಿ ಹೋಗಿರುವ ಬಗ್ಗೆ ವರದಿಯಾಗಿದೆ. ಕೆಲವಡೆ ರಸ್ತೆ ಬದಿಯ ಮರಗಳು ಧರೆಗೆ ಉರುಳಿವೆ. ಒಂದಡೆ ಬರದ ಬಿಸಿಗೆ ಮಳೆಯ ಆಗಮನ ಹರ್ಷವನ್ನು ತಂದರೆ ಮತ್ತೊಂದಡೆ ಗುಡುಗು ಸಿಡಿಲಿಗೆ ಕೆಲವಡೆ ಹಾನಿಯಾಗಿದೆ.





