ವಸತಿ ರಹಿತರಿಗೆ ನಿವೇಶನ ಒದಗಿಸಲು ಆಗ್ರಹಿಸಿ ಧರಣಿ

ಮೂಡಿಗೆರೆ, ಮೇ 13: ಬಡವರಿಗೆ ನಿವೇಶ ಕೊಡದೇ ಶ್ರೀಮಂತರ ಪರ ವಹಿಸಿ ಭೂಮಾಲಕರಿಗೆ ಸರಕಾರಿ ಭೂಮಿಯನ್ನು ಮಂಜೂರುಗೊಳಿಸಿ ಸರಕಾರ ಬಡವರನ್ನು ವಂಚಿಸುತ್ತಿದೆ ಎಂದು ವಸತಿ ಹೋರಾಟ ಸಮಿತಿ ಅಧ್ಯಕ್ಷ ರುದ್ರಯ್ಯ ದೂರಿದ್ದಾರೆ.
ಅವರು ಇಲ್ಲಿನ ತಾಲೂಕು ಕಚೇರಿ ಎದುರು ಬಾಪೂಜಿನಗರ ಮತ್ತು ಸರ್ವೋದಯ ನಗರದ ವಸತಿ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿ, ಜಿಲ್ಲೆಯ ತುಂಬಾ ಕೋಟಿಗಟ್ಟಲೆ ಆಸ್ತಿ ಇರುವ ಅಧಿಕಾರಿಗಳಿದ್ದಾರೆ. ಆದರೆ ವಸತಿರಹಿತ ಬಡವರ ನಿವೇಶನಕ್ಕಾಗಿ ನಡೆಸುವ ಹೋರಾಟಕ್ಕೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ನಿವೇಶನ ಕಲ್ಪಿಸಿಕೊಡಲು ಹಲವು ಬಾರಿ ಹೋರಾಟ ನಡೆಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಿಲಯನ್ಸ್ ಕಂಪೆನಿಯ ಅಂಬಾನಿಗಳಿಗೆ, ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಪಿ.ಚಿದಂಬರಂ, ಮಾಜಿ ವಿಧಾನಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ ಇಂತವರಿಗೆ ಸಾವಿರಾರು ಎಕರೆ ಭೂಮಿಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಒಂದೇ ಗುಡಿಸಲಿನಲ್ಲಿ ಜನರಿಗೆ ನಿವೇಶನ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಜಿಲ್ಲಾಡಳಿತದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಲ್ತಪಡಿಸಿದ್ದಾರೆ.
ಫಾರಂ ನಂ. 53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡುವ ಸಮಿತಿಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಭೂ ಅಕ್ರಮ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಗೂ ಮುನ್ನ ಹಳೆಮೂಡಿಗೆರೆಯ ತೋಟಗಾರಿಕೆ ವಿವಿಯ ಗೇಟ್‌ನಿಂದ ಮೂಡಿಗೆರೆ ಪಟ್ಟಣದವರೆಗೆ ಮೆರವಣಿಗೆ ನಡೆಸಿ ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಮೂಡಿಗೆರೆ ಗ್ರಾಪಂ ಪಿಡಿಒ ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಳೇ ಮೂಡಿಗೆರೆ ಗ್ರಾಪಂ ಉಪಾಧ್ಯಕ್ಷ ಜುಬೇರ್, ಮುಖಂಡರಾದ ಗೋಪಾಲ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ದೇವರಹಳ್ಳಿ ಉಮೇಶ್, ಮಂಜುನಾಥ್, ವಿಜಯ್, ನಿವೇಶನ ರಹಿತರಾದ ಶಿವಪ್ಪ, ಸಂತೋಷ್, ಶೇಖರ್, ರಾಮ, ವಿನೋದ್, ಬಬಿತಾ, ಲಕ್ಷ್ಮೀ, ಮಮತಾ, ಬೇಬಿ ಉಪಸ್ಥಿತರಿದ್ದರು.







