‘ಪ್ರತಿಭಟನೆ ಕೆಬಿಟ್ಟು ಪ್ರಗತಿ ಹಾದಿಯತ್ತ ಬನ್ನಿ'; ಯಡಿಯೂರಪ್ಪರಿಗೆ ಮೇಯರ್ ಪತ್ರ
ಬಿಬಿಎಂಪಿಯ ಆಸ್ತಿ ತೆರಿಗೆ ಹೆಚ್ಚಳ, ವಲಯ ವರ್ಗೀಕರಣಕ್ಕೆ ತೀವ್ರ ವಿರೋಧ
ಬೆಂಗಳೂರು, ಮೇ 13: ಬಿಬಿಎಂಪಿಯಲ್ಲಿ ನಡೆಯುತ್ತಿರುವ ಪ್ರಗತಿ ಸಭೆಗಳು ಕೇವಲ ಗಲಾಟೆ, ಗೊಂದಲಕ್ಕೆ ಸೀಮಿತಗೊಳ್ಳುತ್ತವೆ. ಇದಕ್ಕೆ ಮೂಲ ಕಾರಣ ಪಾಲಿಕೆಯಲ್ಲಿರುವ ಬಿಜೆಪಿ ಸದಸ್ಯರೇ. ಹೀಗಾಗಿ, ಸದಸ್ಯರಿಗೆ ಪ್ರತಿಭಟನೆ ಕೈಬಿಟ್ಟು ನಗರದ ಅಭಿವೃದ್ಧಿಗೆ ಕೈಜೋಡಿ ಸುವಂತೆ ತಿಳುವಳಿಕೆ ಹೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ ಪತ್ರ ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಳ ಹಾಗೂ ವಲಯ ವರ್ಗೀಕರಣ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಆದರೆ, ಆಸ್ತಿ ತೆರಿಗೆ ಹೆಚ್ಚಳ ಬಿಜೆಪಿ ಕಾಲದಲ್ಲಿಯೇ ಆಗಿತ್ತು. ಅಲ್ಲದೆ, ನೀವು(ಯಡಿಯೂರಪ್ಪ) ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. 2009ರಲ್ಲಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಪರಿಷ್ಕರಣೆಗೆ ಅನುಮೋದನೆ ನೀಡಿದ್ದು, 2009ರ ಜನವರಿಯಲ್ಲಿ ವಲಯ ವರ್ಗೀಕರಣ ಮತ್ತು ಆಸ್ತಿ ತೆರಿಗೆ ದರಗಳ ಪರಿಷ್ಕರಣೆಗೆ ಅಧಿಸೂಚನೆ ಹೊರಡಿಸಲಾ ಗಿದೆ. ಆದರೆ, ಇದೇ ವಿಚಾರವನ್ನು ಮುಂದಿಟ್ಟು ಈಗ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿರುವುದು ಏಕೆ ಎಂದು ಮೇಯರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತ ಕಾಲದಲ್ಲಿ ಈ ಅಧಿಸೂಚನೆಯನ್ವಯ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಗಿದ್ದ ವೆಂಕಟೇಶಮೂರ್ತಿ, ವಲಯ ವರ್ಗೀಕರಣ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. 2014-15ರಲ್ಲಿ ವಸತಿ ಸ್ವತ್ತುಗಳಿಗೆ ಶೇ.20, ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ತೆರಿಗೆ ಹೆಚ್ಚಳಕ್ಕೆ ಅಂದಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿಳ್ಳಪ್ಪಅನುಮೋದನೆ ನೀಡಿದ್ದಾರೆ. ಅಲ್ಲದೆ, ಈ ರೀತಿಯ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ತೆರಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ತಾವುಗಳ ತೀರ್ಮಾನದಂತೆ ನಾವು ಈಗ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದೇವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.





