ಮೂಗು ಕೊಯ್ದುಕೊಂಡ ಬಿಜೆಪಿ: ಶಿವಸೇನೆ ವ್ಯಂಗ್ಯ
ಮುಂಬೈ, ಮೇ 13: ಉತ್ತರಾಖಂಡ್ ಬಿಕ್ಕಟ್ಟನ್ನು ಬಿಜೆಪಿ ನಿಭಾಯಿಸಿದ ರೀತಿಗೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪಕ್ಷವನ್ನು ಮತ್ತೊಮ್ಮೆ ತಿವಿದಿದ್ದು ಬಿಜೆಪಿ ಪ್ರಜಾಪ್ರಭುತ್ವದ ಮಹತ್ವವನ್ನು ಅರಿಯಬೇಕು ಎಂದು ಹೇಳಿದೆ.
‘‘ಜನರು ನಿಮಗೆ ಸಂಚು ರೂಪಿಸಿ ಗೊಂದಲ ಏರ್ಪಡಿಸಲು ಅಧಿಕಾರ ನೀಡಿಲ್ಲ. ನಿಮ್ಮನ್ನು ಎತ್ತರಕ್ಕೊಯ್ದ ಜನರೇ ಒಂದು ದಿನ ನಿಮಗೆ ಮಣ್ಣು ತಿನ್ನಿಸುತ್ತಾರೆ. ಹಿಟ್ಲರ್ ನಂಥವನ ಅಹಂ ಕೂಡ ಇಳಿಯುವಂತಹ ಒಂದು ಕಾಲ ಬಂದಿತ್ತು. ಪ್ರಜಾಪ್ರಭುತ್ವದ ಮಹತ್ವ ಅರಿತು ಅಂತೆಯೇ ನಡೆಯಿರಿ’’ ಎಂದು ಸಾಮ್ನಾದಲ್ಲಿನ ಸಂಪಾದಕೀಯ ವೊಂದು ಬಿಜೆಪಿಗೆ ಕಿವಿ ಮಾತು ಹೇಳಿದೆ.
‘‘ಜನರು ನಿಮ್ಮ ಕೈಗೆ ಅಧಿಕಾರ ನೀಡಿ ನಿಮಗೆ ಎರಡಲಗಿನ ಕತ್ತಿಯನ್ನು ನೀಡಿದ್ದಾರೆ. ಎಡವಿ ನಿಮ್ಮ ಮೂಗನ್ನೇ ಕೊಯ್ದುಕೊಳ್ಳದಂತೆ ಜಾಗೃತೆ ವಹಿಸಿರಿ. ಆದರೆ ಉತ್ತರಾಖಂಡದಲ್ಲಿ ಹಾಗೆಯೇ ಆಗಿ ಬಿಟ್ಟಿದೆ’’ ಎಂದು ಬರೆಯಲಾಗಿದೆ.
ಉತ್ತರಾಖಂಡದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ್ದಕ್ಕಾಗಿ ಸಾಮ್ನಾದ ಸಂಪಾದಕೀಯ ದೇಶದ ನ್ಯಾಯಾಂಗವನ್ನು ಪ್ರಶಂಸಿಸಿದೆ ಯಲ್ಲದೆ ಉತ್ತರಾಖಂಡ ಬಿಕ್ಕಟ್ಟು ಹಾಗೂ ಕೇಂದ್ರ ಅದನ್ನು ನಿಭಾಯಿಸಿದ ರೀತಿ ಕಾಂಗ್ರೆಸ್ ಪಕ್ಷದ ಪುನರುಜ್ಜೀವಕ್ಕೆ ‘ಟಾನಿಕ್’ ಆಗಿದೆ ಎಂದು ಹೇಳಿದೆ. ‘‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದವರು ಮಣ್ಣುಮುಕ್ಕಿದ್ದಾರೆ’’ ಎಂದೂ ಅದು ಹೇಳಿದೆ.
‘‘ಈ ಬೆಳವಣಿಗೆ ಬಿಜೆಪಿಗೆ ಸಂಪೂರ್ಣ ಮುಜುಗರ ತಂದಿದೆ. ಉತ್ತರಾಖಂಡದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಅನುಕೂಲಕರವಾಗಿರದೇ ಇದ್ದರೂ ಬಿಜೆಪಿಯ ತಪ್ಪಿನಿಂದಾಗಿ ಈಗ ಕಾಂಗ್ರೆಸ್ಸಿಗೆ ವರದಾನವಾಗಿದೆ’’ಎಂದು ಶಿವಸೇನೆ ಸಾಮ್ನಾದಲ್ಲಿ ಹೇಳಿಕೊಂಡಿದೆ.
ಇತ್ತೀಚಿಗಿನ ದಿನಗಳಲ್ಲಿ ಬಿಜೆಪಿಯನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಪಕ್ಷದ ಒಂದು ಕಾಲದ ಸ್ನೇಹಿತ ಶಿವಸೇನೆ ಬಿಟ್ಟು ಕೊಟ್ಟಿಲ್ಲವೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.





