ಬೀದಿ ನಾಯಿಗಳನ್ನು ಕೊಂದರೆ ಕಠಿಣ ಶಿಕ್ಷೆ: ಸುಪ್ರೀಂ ಕೋರ್ಟ್ ಎಚ್ಚರಿಕೆ
ಹೊಸದಿಲ್ಲಿ, ಮೇ 13: ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿ. ಇನ್ನು ಮುಂದೆ ಬೀದಿ ನಾಯಿಗಳನ್ನು ಕೊಂದರೆ ಜುಜುಬಿ 50 ರೂ. ದಂಡವಷ್ಟೇ ಅಲ್ಲ, ಐದು ವರ್ಷಗಳ ಕಠಿಣ ಜೈಲುಶಿಕ್ಷೆಯನ್ನೂ ವಿಧಿಸುವಂತೆ ಕಾನೂನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದುವರೆಗೆ ಬೀದಿ ನಾಯಿಯನ್ನು ಕೊಂದರೆ ಕೇವಲ 50 ರೂ. ದಂಡ ಮಾತ್ರ ವಿಧಿಸಿ ಬಿಟ್ಟುಬಿಡುವ ಪದ್ಧತಿ ಯಿತ್ತು. ಆದರೆ ಸಾಕು ನಾಯಿಯನ್ನು ಕೊಂದರೆ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ. ಈ ತಾರತಮ್ಯವನ್ನು ಸರಿಪಡಿಸುವಂತೆ ಕಾನೂನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಭಾರತೀಯ ದಂಡ ಸಂಹಿತೆ ಸಾಕು ಪ್ರಾಣಿಗಳನ್ನು ಆಸ್ತಿ ಎಂದು ಪರಿಗಣಿಸುವುದರಿಂದ ಅವುಗಳ ಹತ್ಯೆಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ನೀಡಿದೆ. ಆದರೆ ಬೀದಿ ನಾಯಿಗಳನ್ನು ಆಸ್ತಿ ಎಂದು ಪರಿಗಣಿಸದಿರುವುದರಿಂದ ಈ ತಾರತಮ್ಯ ಉಂಟಾಗಿದೆ. ಹೀಗಾಗಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನುಸಾರ ಕೇವಲ 50 ರೂ. ದಂಡ ವಿಧಿಸಲು ಅವಕಾಶವಿದೆ.
ನಾಯಿಗಳನ್ನು ಕೊಂದರೆ ಕೇವಲ ಇಷ್ಟೇ ದಂಡ ವಿಧಿಸಿ ಕೈತೊಳೆದುಕೊಳ್ಳು ವುದು ನಾಗರಿಕ ಸಮಾಜದ ಲಕ್ಷಣವಲ್ಲ. ಈ ಅಪರಾಧಕ್ಕೂ ಜೈಲುಶಿಕ್ಷೆ ವಿಧಿಸಬೇಕು ಎಂದು ಎನ್‌ಜಿಓ ಸಂಸ್ಥೆಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಅವರ ಪೀಠದ ಮುಂದೆ ವಾದಿಸಿದರು.
ಇದನ್ನು ಪರಿಗಣಿಸಿದ ನ್ಯಾಯಾ ಲಯ, ಸಾಕು ನಾಯಿಗಳ ಜತೆಗೆ ಬೀದಿ ನಾಯಿಗಳ ಹತ್ಯೆಗೂ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತು.





