ನುಡಿದಂತೆ ನಡೆದ ಸರಕಾರ: ಸಿಎಂ

ಬೆಂಗಳೂರು, ಮೇ 13: ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಭ್ರಷ್ಟಾಚಾರ ಮುಕ್ತ, ಕಳಂಕ ರಹಿತ ಆಡಳಿತ ನೀಡಿದ್ದು, ನುಡಿದಂತೆ ನಡೆದಿದ್ದೇವೆ. ಜನತೆಗೆ ಚುನಾವಣೆಗೆ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜಕೀಯ ಪ್ರೇರಿತ ಆರೋಪ ಹೊರತುಪಡಿಸಿದರೆ, ಕಳಂಕ ಮುಕ್ತ ಆಡಳಿತ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರಕಾರದ ಎಲ್ಲ ಯೋಜನೆಗಳು ಜನಪರವಾಗಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಲೆಕ್ಕಾಚಾರವನ್ನು ಗಟ್ಟಿಗೊಳಿಸಿಕೊಳ್ಳುವ ದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಹಿಂದ ಪರ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರಕ್ಕೆ ‘ಅಹಿಂದ’ ಹಣೆಪಟ್ಟಿ ಕಟ್ಟಲು ಕೆಲವರು ಹುನ್ನಾರ ನಡೆಸಿದ್ದು, ಕಾಮಾಲೆ ಕಣ್ಣಿನಿಂದ ನೋಡುವವರಿಗೆ ಎಲ್ಲವೂ ಹಳದಿಯಾಗಿಯೇ ಗೊಚರಿಸುತ್ತದೆ ಎಂದು ಟೀಕಿಸಿದ ಅವರು, ಸ್ನೇಹಿತರೊಬ್ಬರು ನನಗೆ ನೀಡಿದ ಕೈ ಗಡಿಯಾರವನ್ನೇ ದೊಡ್ಡದು ಮಾಡಿದರು ಎಂದು ದೂರಿದರು.
ಈ ಸರಕಾರ ಇನ್ನೂ ಟೇಕಾಫ್ ಆಗಿಲ್ಲ, ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿಯ ಮಧ್ಯೆಯೇ ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಮೂಲಕ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ರಾಜ್ಯ ಸರಕಾರ ಮೂರು ವರ್ಷ ಪೂರೈಸಿದ್ದು ಉಳಿದ ಎರಡು ವರ್ಷಗಳ ಕಾಲ ಇನ್ನೂ ಉತ್ತಮ ರೀತಿಯಲ್ಲಿ ಆಡಳಿತ ನೀಡುವ ಮೂಲಕ ಜನತೆಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ನುಡಿದರು.
ಸಿದ್ದರಾಮಯ್ಯಗೆ ಅಭಿನಂದನೆಗಳ ಮಹಾಪೂರ
ಬೆಂಗಳೂರು, ಮೇ 13: ರಾಜ್ಯ ಸರಕಾರ ಮೂರು ವರ್ಷ ಪೂರೈಸಿ ನಾಲ್ಕನೆ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಪುಟ ಸಹೊದ್ಯೋಗಿಗಳು, ಆಡಳಿತ, ವಿಪಕ್ಷಗಳ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಕ್ಷಭೇದ ಮರೆತು ಅಭಿನಂದಿಸಿದರು.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿ ಆವರಣದಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವರಾದ ಎಚ್.ಆಂಜನೇಯ, ಕಿಮ್ಮನೆ ರತ್ನಾಕರ, ಕೆ.ಜೆ.ಜಾರ್ಜ್, ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕೋನರೆಡ್ಡಿ ಸೇರಿದಂತೆ ಹಲವು ಮಂದಿ ಸಿಎಂಗೆ ಶುಭಾಶಯ ಕೋರಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಹೊಸದಿಲ್ಲಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರವಾಣಿ ಮೂಲಕ ಅಭಿನಂದಿಸಿದರು ಎಂದು ಗೊತ್ತಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ಆಡಂಬರಗಳಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಸಿಎಂಗೆ ಶುಭ ಕೋರಿದ್ದು ವಿಶೇಷ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದಿಸಲು ಬೆಳಗ್ಗೆಯಿಂದಲೇ ಅವರ ಅಧಿಕೃತ ನಿವಾಸ ಕಾವೇರಿ ಸಂಪುಟ ಸಹೊದ್ಯೋಗಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರಿಂದ ತುಂಬಿ ತುಳುಕುವಂತಿತ್ತು.
ಭದ್ರತೆ ಕಾರಣಕ್ಕೆ ಸಚಿವರು, ಶಾಸಕರನ್ನು ಹೊರತುಪಡಿಸಿ ಸಿಎಂ ಸಿದ್ದರಾಮಯ್ಯರ ಅಧಿಕೃತ ನಿವಾಸಕ್ಕೆ ಉಳಿದವರಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸರಳ ರೀತಿಯಲ್ಲಿ ಸಿಹಿ ಹಂಚಿ ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಿಸಿದ್ದು ಕಂಡುಬಂತು.







