ಮಹಾರಾಷ್ಟ್ರದಲ್ಲಿ ನಿಲ್ಲದ ರೈತರ ಆತ್ಮಹತ್ಯೆ
ಬೆಳೆ ವೈಫಲ್ಯ:ಇನ್ನೂ ಮೂವರ ಆತ್ಮಹತ್ಯೆ
ಅಮರಾವತಿ,ಮೇ 13: ಬೆಳೆ ವೈಫಲ್ಯದಿಂದ ಹತಾಶೆ ಮತ್ತು ಬ್ಯಾಂಕ್ ಸಾಲ ಮರುಪಾವತಿ ಚಿಂತೆಯಿಂದಾಗಿ ಇಲ್ಲಿಗೆ ಸಮೀಪದ ಬುಲ್ಡಾನಾ ಜಿಲ್ಲೆಯ ಮಲ್ತಾನಾ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಟುಂಬದ ನಾಲ್ವರು ಸದಸ್ಯರು ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ದಿನೇಶ್ ಮಸಾನೆ(35),ಲಕ್ಷ್ಮೀಬಾಯಿ ಮಸಾನೆ(40) ಮತ್ತು ಸುರೇಶ ಮಸಾನೆ(19) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಜ್ಞಾನಸಿಂಗ್‌ಮಸಾನೆ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಖಮಗಾಂವ್ ಹೆಚ್ಚುವರಿ ಎಸ್‌ಪಿ ಯಶವಂತ್ ಸೋಲಂಕೆ ಸುದ್ದಿಗಾರರಿಗೆ ತಿಳಿಸಿದರು.
ಈ ಕುಟುಂಬವು ಕೃಷಿಯಲ್ಲಿ ತೊಡಗಿಕೊಂಡಿದ್ದು, ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಸೋಯಾ ಬೀನ್ಸ್ ಬೆಳೆದಿದ್ದರು. ಆದರೆ ಕೀಟಗಳ ಹಾವಳಿಯಿಂದಾಗಿ ಬೆಳೆ ವೈಫಲ್ಯದಿಂದ ಹತಾಶಗೊಂಡಿದ್ದ ಅವರು ಒಂದು-ಒಂದೂವರೆ ಲಕ್ಷ ರೂ.ಬ್ಯಾಂಕ್ ಸಾಲ ತೀರಿಸಲಾಗದೆ ಚಿಂತೆಯಲ್ಲಿದ್ದರು ಎಂದು ಅವರು ತಿಳಿಸಿದರು.
ಈ ಕುಟುಂಬದಲ್ಲಿ ಬದುಕುಳಿದಿರುವ ಏಕೈಕ ಸದಸ್ಯಛಗನ್ ಇವರೆಲ್ಲ ವಿಷ ಸೇವಿಸಿದ ಸಂದರ್ಭ ಗ್ರಾಮದಲ್ಲಿರಲಿಲ್ಲ.





