ಕರಾವಳಿಯಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ: ಅಪಾರ ಹಾನಿ

ಉಡುಪಿ, ಮೇ 13: ಕುಡಿಯುವ ನೀರಿಗಾಗಿ ಜಿಲ್ಲೆಯ ಜನತೆಯ ಹಾಹಾಕಾರದ ನಡುವೆ ಬುಧವಾರ ದಿಂದ ಅಲ್ಪಪ್ರಮಾಣದಲ್ಲಿ ಆರಂಭಗೊಂಡ ಮುಂಗಾರು ಪೂರ್ವ ಮಳೆ ಎರಡೇ ದಿನಗಳಲ್ಲಿ ತನ್ನ ಪ್ರತಾಪವನ್ನು ತೋರಲಾರಂಭಿಸಿದ್ದು, ಲಕ್ಷಾಂತರ ರೂ.ವೌಲ್ಯದ ಬೆಳೆ ಹಾನಿ, ಸೊತ್ತು ನಾಶವಾದ ಬಗ್ಗೆ ಜಿಲ್ಲೆಯ ನಾನಾಭಾಗಗಳಿಂದ ಈಗಾಗಲೇ ವರದಿಯಾಗಿದೆ.
ನಿನ್ನೆ ಸಂಜೆ ಕಾರ್ಕಳ ತಾಲೂಕು ಕಣಜಾರು ಗ್ರಾಮದ ಅಶೋಕ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 10,000 ರೂ. ನಷ್ಟ ಸಂಭವಿಸಿದೆ. ಅದೇ ರೀತಿ ನೀರೆ ಗ್ರಾಮದ ಆಶಾ ಶೆಟ್ಟಿ ಎಂಬವರ ಮನೆಗೂ ಸಿಡಿಲು ಬಡಿದು ಭಾಗಶ: ಹಾನಿಯಾಗಿ 10,000 ರೂ. ನಷ್ಟವಾಗಿದೆ.
ಬುಧವಾರ ಸಂಜೆ ಇವರ್ತೂರು ಗ್ರಾಮದ ರತ್ನಾವತಿ ಜೈನ್ ಎಂಬವರ ದನದ ಕೊಟ್ಟಿಗೆಗೆ ಸಿಡಿಲು ಬಡಿದು ಒಂದು ದನ ಮೃತಪಟ್ಟಿದೆ. ಇನ್ನೆರಡು ದನಗಳು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇದರಿಂದ 20,000 ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ನಾರಾಯಣ ಪೂಜಾರಿ ಎಂಬವರ ಮನೆಯ ಮೇಲೆ ನಿನ್ನೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 15,000 ರೂ. ಹಾಗೂ ವಡೇರಹೋಬಳಿ ಗ್ರಾಮದ ಸಂಜೀವ ಶೇರೆಗಾರ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು 80,000 ರೂ.ಗಳಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳದಲ್ಲಿ ತೋಟಗಳಿಗೆ ಹಾನಿ: ತಾಲೂಕಿನ ಮಾಳಗ್ರಾಮದ ಪದ್ಮನಾಭ ನಾಯಕ್ ಎಂಬವರ ಅಡಿಕೆ ಹಾಗೂ ಬಾಳೆತೋಟಕ್ಕೆ ಹಾನಿಯಾಗಿ 13,000 ರೂ. ನಷ್ಟ ಸಂಭವಿಸಿದರೆ, ಅದೇಗ್ರಾಮದ ಗುಲಾಬಿ ಹೆಗ್ಡೆ ಎಂಬವರ ಅಡಿಕೆ ಮತ್ತು ಬಾಳೆತೊಟಕ್ಕೆ ಹಾನಿಯಾಗಿ 17,000 ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ನೂರಾಲ್‌ಬೆಟ್ಟು ಗ್ರಾಮದಲ್ಲಿ ಸುಮಾರು ಐದಾರು ಮನೆಗಳಿಗೆ ಸೇರಿದ ಬಾಳೆ ಹಾಗೂ ಅಡಿಕೆ ತೋಟಗಳು ಸಂಪೂರ್ಣ ಹಾಗೂ ಭಾಗಶ: ನಾಶವಾಗಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿವೆ ಎಂದು ಕಾರ್ಕಳ ತಹಶೀಲ್ದಾರ್ ರಾಘವೇಂದ್ರ ತಿಳಿಸಿದ್ದಾರೆ. ಅಲ್ಬಾಡಿಯಲ್ಲಿ ತೋಟ ನಾಶ: ಮೇ 11ರ ಸಂಜೆ ಬೀಸಿದ ಭಾರಿ ಗಾಳಿ ಸಹಿತ ಮಳೆಯಿಂದ ಕುಂದಾಪುರ ತಾಲೂಕು ಬೆಳ್ವೆ ಗ್ರಾಪಂ ವ್ಯಾಪ್ತಿಯ ಅಲ್ಬಾಡಿ ಗ್ರಾಮದ ಚಾರ್‌ಬೈಲ್ ಶಾಜು ಜೋಸೆಫ್ ಎಂಬವರಿಗೆ ಸೇರಿದ ಬಾಳೆ ಹಾಗೂ ಅಡಿಕೆ ತೋಟಕ್ಕೆ ವ್ಯಾಪಕ ಹಾನಿಯಾಗಿದೆ.
21:3 ಮಿ.ಮೀ ಮಳೆ: ಗುರುವಾರ ಉಡುಪಿ ಜಿಲ್ಲೆಯಲ್ಲಿ 6.7 ಮಿ.ಮೀ ಮಾತ್ರ ಮಳೆಯಾಗಿದ್ದರೆ, ಇಂದು ಸರಾಸರಿ 21.3 ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 18 ಮಿ.ಮೀ., ಕುಂದಾಪುರದಲ್ಲಿ 19.5 ಮಿ.ಮೀ. ಹಾಗೂ ಕಾರ್ಕಳದಲ್ಲಿ 26.5 ಮಿ.ಮೀ. ಮಳೆ ಸುರಿದಿದೆ ಎಂದು ವರದಿಗಳು ತಿಳಿಸಿವೆ. ಆದರೆ ಇದರಿಂದ ಕುಡಿಯುವ ನೀರಿನ ಲಭ್ಯತೆಯ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.







