116 ವರ್ಷದ, ಜಗತ್ತಿನ ಹಿರಿಯ ವ್ಯಕ್ತಿ ಇನ್ನಿಲ್ಲ
ನ್ಯೂಯಾರ್ಕ್, ಮೇ 13: ಜಗತ್ತಿನ ಅತಿ ಹಿರಿಯ ವ್ಯಕ್ತಿ ಸುಸಾನಾ ಮಶಟ್ ಜೋನ್ಸ್ ತನ್ನ 116ನೆ ವಯಸ್ಸಿನಲ್ಲಿ ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಅವರು 10 ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು.
ಬ್ರೂಕ್ಲಿನ್‌ನಲ್ಲಿರುವ ಹಿರಿಯರ ಆಶ್ರಯ ಮನೆಯೊಂದರಲ್ಲಿ ಮೇ 12ರ ರಾತ್ರಿ ಜೋನ್ಸ್ ಕೊನೆಯುಸಿರೆಳೆದರು ಎಂದು ಲಾಸ್ ಏಂಜಲಿಸ್‌ನ ಜೆರಾಂಟಾಲಜಿ ರಿಸರ್ಚ್ ಗ್ರೂಪ್‌ನ ಹಿರಿಯ ಸಲಹಾಕಾರ ರಾಬರ್ಟ್ ಯಂಗ್ ತಿಳಿಸಿದರು. ತನ್ನ ಈ ಮನೆಯಲ್ಲಿ ಈ ಹಿರಿಯ ಮಹಿಳೆ ಮೂರು ದಶಕಗಳಿಗೂ ಅಧಿಕ ಅವಧಿಯಿಂದ ವಾಸವಾಗಿದ್ದರು.
ಅಲಬಾಮ ರಾಜ್ಯದ ಮಾಂಟ್‌ಗೊಮರಿ ಸಮೀಪದ ಸಣ್ಣ ಕೃಷಿ ಪಟ್ಟಣವೊಂದರಲ್ಲಿ ಜೋನ್ಸ್ 1899ರಲ್ಲಿ ಜನಿಸಿದರು. ಅವರು 11 ಮಂದಿ ಸಹೋದರ-ಸಹೋದರಿಯರ ಪೈಕಿ ಒಬ್ಬರಾಗಿದ್ದರು. ಎಳೆಯ ಕರಿಯ ಬಾಲಕಿಯರಿಗಾಗಿನ ವಿಶೇಷ ಶಾಲೆಗೆ ಅವರು ಹಾಜರಾದರು. 1922ರಲ್ಲಿ ಅವರು ಹೈಸ್ಕೂಲ್ ಪದವಿ ಪಡೆದರು.
ಕುಟುಂಬವನ್ನು ಪ್ರೀತಿಸಿದುದು ಹಾಗೂ ಇತರರ ಬಗ್ಗೆ ಉದಾರತೆ ತೋರಿಸಿದ್ದು ಅವರ ದೀರ್ಘಾಯುಶ್ಯಕ್ಕೆ ಕಾರಣ ಎಂಬುದಾಗಿ ಕುಟುಂಬ ಸದಸ್ಯರು ಕಳೆದ ವರ್ಷ ಹೇಳಿದ್ದರು.
ಕಳೆದ ವರ್ಷ 117 ವರ್ಷದ ಮಿಸಾವೊ ಟೋಕಿಯೊದಲ್ಲಿ ನಿಧನರಾದ ಬಳಿಕ ಜೋನ್ಸ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡರು.
ಇನ್ನು ಜೋನ್ಸ್‌ಗಿಂತ ಕೆಲವೇ ತಿಂಗಳುಗಳಷ್ಟು ಕಿರಿಯರಾಗಿರುವ ಇಟಲಿಯ ವರ್ಬೇನಿಯದ 116 ವರ್ಷದ ಎಮ್ಮಾ ಮೊರಾನೊ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಲಿದ್ದಾರೆ.





