ಬಿಸಿಸಿಐ ಅಧ್ಯಕ್ಷನಾಗುವ ಅರ್ಹತೆ ನನಗಿಲ್ಲ: ಗಂಗುಲಿ
ಕೋಲ್ಕತಾ, ಮೇ 13: ಬಿಸಿಸಿಐ ಅಧ್ಯಕ್ಷನಾಗುವ ಅರ್ಹತಾ ಮಾನದಂಡವನ್ನು ನಾನು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಅಧ್ಯಕ್ಷನಾಗುವ ಅರ್ಹತೆ ನನಗಿಲ್ಲ ಎಂದು ಭಾರತದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಅಸೋಸಿಯೇಶನ್(ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗುಲಿ ಹೇಳಿದ್ದಾರೆ.
ಶಶಾಂಕ್ ಮನೋಹರ್ ಮಂಗಳವಾರ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಿಗಾಗಿ ಶೋಧ ನಡೆಯುತ್ತಿದೆ. ಗಂಗುಲಿ ಕನಿಷ್ಠ ಮೂರು ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಹಾಜರಾಗುತ್ತಿದ್ದರೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಿತ್ತು. ಗಂಗುಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಗಮೋಹನ್ ದಾಲ್ಮಿಯಾರ ಹಠಾತ್ ನಿಧನದಿಂದ ತೆರವಾಗಿದ್ದ ಸಿಎಬಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷನಾಗುವ ಅರ್ಹತಾ ಮಾನದಂಡವನ್ನು ನಾನು ತಲುಪಿಲ್ಲ ಎಂಬುದು ನನ್ನ ಭಾವನೆ. ಮನೋಹರ್ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ. ಪ್ರತಿಷ್ಠಿತ ಹುದ್ದೆ ವಹಿಸಿಕೊಳ್ಳಲು ಸಾಕಷ್ಟು ಅನುಭವಿ ವ್ಯಕ್ತಿಗಳಿದ್ದಾರೆ. ನಾನು ಅಧ್ಯಕ್ಷ ಸ್ಥಾನದ ಮೇಲೆ ಆಸಕ್ತಿ ಹೊಂದಿಲ್ಲ ಎಂದು ಬಂಧನ್ ಬ್ಯಾಂಕ್‌ನ ಹೊಸ ಶಾಖೆಯನ್ನು ಉದ್ಘಾಟಿಸಿದ ಬಳಿಕ ಗಂಗುಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.





