ಫಿಫಾದ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಸವೌರಾ ಆಯ್ಕೆ
ಪ್ಯಾರಿಸ್, ಮೇ 13: ಫಿಫಾದ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಸೆನೆಗಲ್‌ನ ಫಾತ್ಮಾ ಸಾಂಬಾ ಡಿಯೊಫ್ ಸವೌರಾ ಶುಕ್ರವಾರ ಆಯ್ಕೆಯಾಗಿದ್ದಾರೆ.
ಸವೌರಾ ಫಿಫಾದ ಮಾಜಿ ಪ್ರಧಾನ ಕಾರ್ಯದರ್ಶಿ ಜೆರೊಮ್ ವಾಲ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ವಾಲ್ಕೆ ಫುಟ್ಬಾಲ್ ಸಂಬಂಧಿತ ಚಟುವಟಿಕೆಯಿಂದ 12 ವರ್ಷಗಳ ಕಾಲ ನಿಷೇಧ ಎದುರಿಸುತ್ತಿದ್ದಾರೆ.
54ರಹರೆಯದ ಸವೌರಾ 21 ವರ್ಷಗಳ ಕಾಲ ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು, ಜೂನ್ ತಿಂಗಳಿಂದ ಫಿಫಾ ಆಡಳಿತ ಮಂಡಳಿಯಲ್ಲಿ ತಮ್ಮ ಹುದ್ದೆ ಸ್ವೀಕರಿಸಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆಯ ಪರವಾಗಿ ನೈಜೀರಿಯಲ್ಲಿ ಕರ್ತವ್ಯ ನಿರತವಾಗಿರುವ ಸವೌರಾ ಫಿಫಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡುವ ಮೊದಲು ಅರ್ಹತಾ ಪರೀಕ್ಷೆಗೆ ಒಳಪಟ್ಟಿದ್ದರು. ನಾಲ್ಕು ಭಾಷೆಗಳಲ್ಲಿ ಮಾತನಾಡಬಲ್ಲ ಸವೌರಾ 1995ರಲ್ಲಿ ರೋಮ್‌ನಲ್ಲಿ ವಿಶ್ವ ಆಹಾರ ಕಾರ್ಯಕ್ರಮದಲ್ಲಿ ಹಿರಿಯ ಸಾರಿಗೆ ಅಧಿಕಾರಿಯಾಗಿ ಆಯ್ಕೆಯಾಗುವುದರೊಂದಿಗೆ ವಿಶ್ವಸಂಸ್ಥೆಯಲ್ಲಿ ತನ್ನ ವೃತ್ತಿಜೀವನ ಅರಂಭಿಸಿದ್ದರು. ಮೆಕ್ಸಿಕೊ ಸಿಟಿಯ ಫಿಫಾ ಕಾಂಗ್ರೆಸ್‌ನಲ್ಲಿ ಸವೌರಾ ಆಯ್ಕೆಯನ್ನು ಘೋಷಿಸಲಾಗಿದೆ. ವಾಲ್ಕೆ ಹಾಗೂ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಅಧಿಕಾರವಧಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಫಿಫಾ ಆಡಳಿತ ಮಂಡಳಿಯಲ್ಲಿ ಭಾರೀ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.
1998 ರಿಂದ ಫಿಫಾದ ಅಧ್ಯಕ್ಷರಾಗಿದ್ದ ಬ್ಲಾಟರ್ ಕಳೆದ ವರ್ಷ ಭ್ರಷ್ಟಾಚಾರದ ಆರೋಪದಲ್ಲಿ ಆರು ವರ್ಷಗಳ ಕಾಲ ಫುಟ್ಬಾಲ್‌ನಿಂದ ಅಮಾನತುಗೊಳಿಸಲಾಗಿತ್ತು.
‘‘ಇಂದು ನನ್ನ ಪಾಲಿಗೆ ಅದ್ಭುತವಾದ ದಿನ. ಈ ಹುದ್ದೆಯನ್ನು ವಹಿಸಿಕೊಳ್ಳುವುದು ಮಹಾಗೌರವವಾಗಿದೆ. ನನ್ನ ಕೌಶಲ್ಯ ಹಾಗೂ ಅನುಭವವಕ್ಕೆ ಈ ಪಾತ್ರ ಸರಿಯಾಗಿದೆ.ಫಿಫಾದಲ್ಲಿ ಈಗಾಗಲೇ ನಡೆಯುತ್ತಿರುವ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರಲು ನೆರವಾಗುವೆ’’ ಎಂದು ಸವೌರಾ ಹೇಳಿದ್ದಾರೆ.







