ಡಿಲ್ಮಾ ರೌಸಿಫ್ ಅಮಾನತು; ಟೆಮರ್ ನೂತನ ಅಧ್ಯಕ್ಷ
ಬ್ರೆಝಿಲ್

ಹುದ್ದೆಯಿಂದ ಕೆಳಗಿಳಿಯುವ ಮೊದಲು, ಬ್ರೆಝಿಲ್ನ ಅಧ್ಯಕ್ಷೀಯ ಅರಮನೆಯ ಹೊರಗೆ ಗುರುವಾರ ತನ್ನ ಬೆಂಬಲಿಗರನ್ನು ಭೇಟಿ ಮಾಡುತ್ತಿರುವ ಅಧ್ಯಕ್ಷೆ ಡಿಲ್ಮಾ ರೌಸಿಫ್. ತನ್ನ ವಿರುದ್ದದ ಛೀಮಾರಿ ಪ್ರಕ್ರಿಯೆ ತನ್ನ ವಿರುದ್ಧ ಹೂಡಲಾದ ಸಂಚಿನ ಒಂದು ಭಾಗ ಎಂದು ಅವರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬ್ರೆಸೀಲಿಯ (ಬ್ರೆಝಿಲ್), ಮೇ 13: ಬ್ರೆಝಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ರನ್ನು ಭ್ರಷ್ಟಾಚಾರದ ಆರೋಪದಲ್ಲಿ ಸಂಸತ್ತು ಅಮಾನತುಗೊಳಿಸಿದ ಬಳಿಕ, ಉಪಾಧ್ಯಕ್ಷ ಮೈಕಲ್ ಟೆಮರ್ ಗುರುವಾರ ದೇಶದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದರೊಂದಿಗೆ ಲ್ಯಾಟಿನ್ ಅಮೆರಿಕದ ಅತ್ಯಂತ ದೊಡ್ಡ ದೇಶದಲ್ಲಿ 13 ವರ್ಷಗಳ ಎಡಪಂಥೀಯ ಆಡಳಿತ ಕೊನೆಗೊಂಡು, ಉದ್ಯಮ ಪರ ಸರಕಾರವೊಂದು ಸ್ಥಾಪನೆಯಾಗಿದೆ.
ತಿಂಗಳುಗಳ ಅವಧಿಯ ಆರ್ಥಿಕ ಮತ್ತು ರಾಜಕೀಯ ಸಂಕಷ್ಟದ ಬಳಿಕ, ತಾನು ''ವಿಶ್ವಾಸಾರ್ಹತೆ''ಯನ್ನು ಮರುಸ್ಥಾಪಿಸುವುದಾಗಿ ನೂತನ ಅಧ್ಯಕ್ಷರು ಘೋಷಿಸಿದರು.
ದಶಕಗಳ ಅವಧಿಯ ಆರ್ಥಿಕ ಹಿಂಜರಿತವನ್ನು ಹಳಿಗೆ ತರುವ ಪ್ರಯತ್ನವಾಗಿ ಸೆಂಟ್ರಲ್ ಬ್ಯಾಂಕ್ನ ಮಾಜಿ ಮುಖ್ಯಸ್ಥ ಹೆನ್ರಿಕ್ ಮೇರಲಸ್ರನ್ನು ಹಣಕಾಸು ಸಚಿವರಾಗಿ ಅವರು ನೇಮಿಸಿದ್ದಾರೆ.
ತನ್ನ ವಿರುದ್ಧದ ಛೀಮಾರಿ ಪ್ರಕ್ರಿಯೆಯನ್ನು ಕೊನೆಯ ಕ್ಷಣದವರೆಗೂ ವಿರೋಧಿಸುತ್ತಾ ಬಂದ ಡಿಲ್ಮಾ ರೌಸೆಫ್, ತಾನು ಅಧ್ಯಕ್ಷೆಯಾಗಿದ್ದ ಕೊನೆಯ ನಿಮಿಷಗಳಲ್ಲೂ ತನ್ನ ವಿರುದ್ಧದ ''ಕ್ಷಿಪ್ರ ಕ್ರಾಂತಿ''ಯನ್ನು ಖಂಡಿಸಿದರು ಹಾಗೂ ಒಗ್ಗೂಡುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದರು.
''ಮತಪೆಟ್ಟಿಗೆಯ ಗೌರವ, ಬ್ರೆರಿಲ್ ಜನತೆಯ ಸಾರ್ವಭೌಮತೆ ಮತ್ತು ಸಂವಿಧಾನ ಅಪಾಯದಲ್ಲಿದೆ'' ಎಂದು ಅಧ್ಯಕ್ಷೀಯ ಅರಮನೆಯಿಂದ ಮಾಡಿದ ತನ್ನ ಕೊನೆಯ ಭಾಷಣದಲ್ಲಿ ಅವರು ಹೇಳಿದರು.
ಇದಕ್ಕೂ ಮೊದಲು, ಸೆನೆಟ್ನಲ್ಲಿ ನಡೆದ 22 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ, ಅಧ್ಯಕ್ಷೆಯ ವಿರುದ್ಧ ಛೀಮಾರಿ ಪ್ರಕ್ರಿಯೆ ಆರಂಭಿಸುವುದರ ಪರವಾಗಿ 55 ಹಾಗೂ ವಿರುದ್ಧವಾಗಿ 22 ಮತಗಳು ಬಿದ್ದವು.





