ಅಪರಾಧಿಗಳಿಗೆ 6 ವರ್ಷಗಳ ಬಳಿಕ ಸ್ಪರ್ಧೆಗೆ ಅವಕಾಶ ಪ್ರಶ್ನಿಸಿ ರಿಟ್
ಕೇಂದ್ರ, ಚು. ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಚೆನ್ನೈ, ಮೇ 13: ಜೈಲು ಶಿಕ್ಷೆಗೊಳಗಾದವರಿಗೆ ಆರು ವರ್ಷಗಳ ಆನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಜನತಾ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿಎ)ಯ ಕೆಲವು ನಿರ್ದಿಷ್ಟ ಕಾನೂನುಗಳು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿದ್ದು, ಈ ಬಗ್ಗೆ ಕಾನೂನು ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಅಪರಾಧ ಪ್ರಕರಣದ ದೋಷಿಗಳ ಅನರ್ಹತೆಯ ಅವಧಿಯನ್ನು ಕೇವಲ ಆರು ವರ್ಷಗಳಿಗೆ ಸೀಮಿತಗೊಳಿಸುವ ಆರ್‌ಪಿಎ ಕಾಯ್ದೆಯ 8 ಹಾಗೂ 9 ಸೆಕ್ಷನ್‌ಗಳಲ್ಲಿನ ನಿಯಮಗಳು ಅಸಾಂವಿಧಾನಿಕವೆಂದು ಘೋಷಿಸಬೇಕೆಂದು ಚೆನ್ನೈ ಮಹಾನಗರದ ಚಿಪಾಕ್ ಕ್ಷೇತ್ರದ ಮತದಾರರೊಬ್ಬರು ಇತ್ತೀಚೆಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಕಿಶನ್ ಕೌಲ್ ಹಾಗೂ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ. ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ಈ ಕಾನೂನನ್ನು ಅನ್ವಯಿಸುವಾಗ ತಾರತಮ್ಯವಾಗಿದೆಯೆಂದು ಅರ್ಜಿದಾರರು ಆರೋಪಿಸಿದ್ದರು. ನ್ಯಾಯಾಂಗದಲ್ಲಿ ಬಂಧಿತ ವ್ಯಕ್ತಿಯು ಕ್ರಿಮಿನಲ್ ಪ್ರಕರಣದಲ್ಲಿ ದೋಷಿಯೆನಿಸಿದಲ್ಲಿ, ತನ್ನಿಂತಾನೆ ಆತನನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ. ಆದರೆ ಕಾರ್ಯಾಂಗದಲ್ಲಿ ದೋಷಿಗಳು ತಮ್ಮ ಶಿಕ್ಷೆಯ ಆರು ವರ್ಷಗಳ ಅವಧಿ ಮುಗಿದ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಕನಿಷ್ಠ ಶೈಕ್ಷಣಿಕ ಅರ್ಹತೆ, ಸನ್ನಡತೆ ಹಾಗೂ ನಡವಳಿಕೆಯ ಬಗೆಗೂ ಯಾವುದೇ ಸಮರ್ಪಕ ಮಾರ್ಗದರ್ಶಿ ಸೂತ್ರಗಳನ್ನು ಜನತಾ ಪ್ರಾತಿನಿಧ್ಯ ಕಾಯ್ದೆ ನೀಡಿಲ್ಲವೆಂದು ಅವರು ದೂರಿದ್ದಾರೆ.





