ಮುಂಬೈಯಲ್ಲಿ ನೆರೆಹೊರೆಯವರಿಗೆ ಉಚಿತ ನೀರುಣಿಸುವ ಝರೀನಾ

ಮುಂಬೈ, ಮೇ 14: ಮುಂಬೈಯಲ್ಲಿ ನೀರಿಗೆ ಹಾಹಾಕಾರ ಇದೆ. ದೇಶದ 13 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ ಇದರಿಂದಾಗಿ 6.5 ಲಕ್ಷ ಕೋಟಿ ರೂ. ಹಾನಿಯಾಗಿದೆ.ಅಸಂಖ್ಯಾತ ಜಾನುವಾರುಗಳು ಸಾವನ್ನಪ್ಪಿವೆ.
ಭಾರತದ ಮಾಯಾನಗರಿ ಮುಂಬೈ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದು ಜಲಸರಬರಾಜು ಇಲಾಖೆಯು ನೀರನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಹಾನಿ ಝೋಪಡಾ ಪಟ್ಟಿಯ ಜನಿರಿಗಾಗಿದೆ. ಅವರು ಲವಣಯುಕ್ತ ನೀರನ್ನೂ ಖರೀದಿಸಿ ಇತರ ಅಗತ್ಯಗಳಿಗೆ ಬಳಸಬೇಕಾಗಿದೆ. ನೀರು ಮಾಫಿಯಾ ಲವಣಯುಕ್ತ ನೀರನ್ನೇ ಹೆಚ್ಚಿನ ಬೆಲೆಗೆ ಮಾರಿ ಭಾರೀ ಲಾಭಗಳಿಸುತ್ತಿದೆ. ಇಂತಹ ನೀರನ್ನು ಜನರು ಸ್ನಾನ ಮಾಡಲು ಪಾತ್ರೆ ತೊಳೆಯಲು ಬಟ್ಟೆ ಒಗೆಯಲು ಬಳಸುತ್ತಿದ್ದಾರೆ. ಇಂತಹ ಒಂದು ಜಾಗದಲ್ಲಿ ವಾಸಿಸುವ ಝರೀನಾ ಹೆಸರಿನ ಮಹಿಳೆ ತಮ್ಮ ಪ್ರದೇಶದ ಜನರ ನೀರಿನ ಅಗತ್ಯವನ್ನು ಉಚಿತವಾಗಿ ಪೂರೈಸಲು ಮುಂದಾಗಿದ್ದು ಉಚಿತ ಜಲಸೇವೆಯಿಂದ ಪ್ರಶಂಸಿಲ್ಪಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಝರೀನಾ ಮನೆಯಲ್ಲಿ ಒಂದು ಹಳೆಯ ಬಾವಿ ಇದೆ. ಬಾವಿಯ ನೀರು ಲವಣಯುಕ್ತವೇ ಆಗಿದ್ದರು. ಜನರ ಇತರ ಅಗತ್ಯದ ಈಡೇರಿಕೆಗಾಗಿ ತನ್ನ ನೆರೆಕರೆಯವರಿಗೆ ಇದರಿಂದ ನೀರನ್ನು ಅವರು ಉಚಿತವಾಗಿ ನೀಡುತ್ತಿದ್ದಾರೆ. ಒಂದೆಡೆ ನೀರಿನ ಮಾಫಿಯ ಲವಣದ ನೀರನ್ನೇ ಮಾರಿ ಹಣ ಮಾಡುತ್ತಿರುವಾಗ ಈ ಮಹಿಳೆಯ ಉಚಿತ ಸೇವೆ ಬಹುಪ್ರಶಂಸೆಗೆ ಭಾಜನವಾಗುತ್ತಿದೆ. ಝರೀನಾ ಹೇಳುತ್ತಾರೆ"ನಾನೇಕೇ ನೀರನ್ನು ಮಾರಿ ಪಾಪದ ಭಾರವನ್ನು ಹೊರಬೇಕು. ನೀರನ್ನು ಮಾರಿ ಹಣಮಾಡುವುದೊಂದು ಜೀವನವೇ?" ಎಂದು ಪ್ರಶ್ನಿಸುತ್ತಾರೆ.
ಝರಿನಾರಿಗೆ ಹತ್ತು ಮಕ್ಕಳಿದ್ದು ಇಬ್ಬರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಪತಿ ಅವರನ್ನು ಮತ್ತು ಅವರ ಮಕ್ಕಳನ್ನು ತೊರೆದು ಹೋಗಿದ್ದಾರೆ. ಝರೀನಾ ಕೆಲಸ ಮಾಡಿ ತಮ್ಮ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದಾರೆ.
ಝರೀನಾ ಬಡವರು ನಿಜ. ಆದರೆ ಅವರಿಗೆ ಶ್ರೀಮಂತ ಮನಸ್ಸಿದೆ ಎಂದು ಸಾಬೀತು ಪಡಿಸಿದ್ದಾರೆ. ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಇಂತಹ ಜನರ ಸೇವೆ ಒಂದು ಬಹುದೊಡ್ಡ ಉದಾಹರಣೆಯಾಗಿ ಎದ್ದು ಕಾಣುತ್ತಿವೆ. ತಾನು ಬಡವಳಾಗಿದ್ದೂ ಹಣ ಮಾಡುವ ಅವಕಾಶ ಇದ್ದೂ ಅಗತ್ಯವಿರುವವರಿಗೆ ಉಚಿತ ನೀರು ನೀಡುವ ಮಹಿಳೆಯ ಕುರಿತು ಪ್ರಶಂಸೆಗಳು ವ್ಯಕ್ತವಾಗಿವೆ ಎಂದು ವರದಿಗಳು ತಿಳಿಸಿವೆ.







