ಪ್ರಧಾನಿ ಮೋದಿಯ ‘ಸೊಮಾಲಿಯ ಹೋಲಿಕೆ’ಯನ್ನು ಸಮರ್ಥಿಸಿಕೊಂಡ ಕೇರಳ ಬಿಜೆಪಿ ನಾಯಕರು

ತಿರುವನಂತಪುರಂ, ಮೇ 14: : ಪ್ರಧಾನಿ ನರೇಂದ್ರ ಮೋದಿ ತನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿ ಸಾಕಷ್ಟು ಆಕ್ರೋಶ ಎದುರಿಸುವಂತಾಗಿದ್ದು ನಿಜವಾದರೂ ರಾಜ್ಯದ ಬಿಜೆಪಿ ಅಭ್ಯರ್ಥಿಗಳು, ನಾಯಕರು ಹಾಗೂ ಕಾರ್ಯಕರ್ತರು ತಮ್ಮ ನಾಯಕನನ್ನು ಬೆಂಬಲಿಸುವಲ್ಲಿ ಹಿಂದೆ ಬಿದ್ದಿಲ್ಲ. ಕೇರಳದ ಆದಿವಾಸಿಗಳ ಹೀನಾಯ ಪರಿಸ್ಥಿತಿಯನ್ನು ಪರಿಗಣಿಸಿ ಮೋದಿ ಮಾಡಿದ ಈ ಹೇಳಿಕೆಯಲ್ಲಿ ಅವರಿಗೆ ತಪ್ಪೇನೂ ಕಾಣುತ್ತಿಲ್ಲ.
‘‘ಮೋದಿ ನಿಜ ಹೇಳಿಲ್ಲವೇನು ? ನಮ್ಮ ರಾಜ್ಯದಲ್ಲಿ ತೀರಾ ಬಡತನದಲ್ಲಿರುವ ಆದಿವಾಸಿಗಳ ಬಗ್ಗೆ ಎಲ್ಲರಿಗೂ ಗೊತ್ತು,’’ ಎನ್ನುತ್ತಾರೆ ಮಾಜಿ ಕೇರಳ ಬಿಜೆಪಿ ಅಧ್ಯಕ್ಷ ಇ ಎಸ್ ಶ್ರೀಧರನ್ ಪಿಳ್ಳೈ. ತಾವು ಹಾಗೂ ತಮ್ಮ ಪಕ್ಷ ಮೋದಿ ವಿರುದ್ಧ ಕೇಳಿ ಬಂದಿರುವ ಟೀಕೆಗಳ ಮಹಾಪೂರವನ್ನು ನಿರ್ಲ್ಯಕ್ಷಿಸುವುದಾಗಿ ಚೆಂಗನೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಿಳ್ಳೈ ತಿಳಿಸಿದರು. ಇದೊಂದು ಚುನಾವಣಾ ವಿಷಯವೇ ಅಲ್ಲ ಎಂದೂ ಅವರು ವಾದಿಸಿದರು.
ಅತ್ತ ಕೇರಳ ಬಿಜೆಪಿ ಅಧ್ಯಕ್ಷ ಕುಮ್ಮನೆಂ ರಾಜಶೇಖರನ್ ಪ್ರಕಾರ ಮೋದಿ ಕಹಿ ಸತ್ಯವನ್ನಷ್ಟೇ ಹೇಳಿದ್ದಾರೆ. ‘‘ಕೇರಳವನ್ನು ಹಲವಾರು ದಶಕಗಳಿಂದ ಆಳುತ್ತಿರುವ ವಿವಿಧ ರಂಗಗಳು ಆದಿವಾಸಿಗಳ ಸ್ಥಿತಿಯನ್ನು ಸುಧಾರಿಸಲು ವಿಫಲವಾಗಿವೆಯೆಂಬುದು ಸತ್ಯ,’’ ಎಂದವರು ಹೇಳಿದರು.
ಅತ್ತ ಪ್ರಧಾನಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದಕ್ಕಾಗಿ ಪ್ರಧಾನಿ ಕ್ಷಮಾಪಣೆ ಯಾಚಿಸಬೇಕೆಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆಗ್ರಹಿಸಿದ್ದರೆ ‘ಆಧಾರರಹಿತ ವಿಚಾರಗಳನ್ನು ಎತ್ತುವ ಚಾಂಡಿಯೇ ಕ್ಷಮೆ ಕೇಳಬೇಕು,’’ಎಂದು ರಾಜಶೇಖರನ್ ಹೇಳುತ್ತಾರೆ.
ಚಾಂಡಿಯವರನ್ನು ಟೀಕಿಸುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಕ್ಕಾಡ್ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶೋಭಾ ಸುರೇಂದ್ರನ್ ‘‘ಇದು ಚಾಂಡಿ ಪಾಲಿನ ವಾಟರ್ ಲೂ ಆಗಲಿದೆ. ಮೋದಿ ನಿಜ ಹೇಳಿದ್ದಕ್ಕೆ ಇಷ್ಟೊಂದು ದೊಡ್ಡ ವಿವಾದವಾಗಿದೆಯೇ ? ಪಾಲಕ್ಕಾಡ್ ಹಾಗೂ ವಯನಾಡ್ ನ ಕೆಲವು ಆದಿವಾಸಿ ಪ್ರದೇಶಗಳಲ್ಲಿ 300 ಶಿಶುಗಳ ಮರಣಾ ನಂತರ ಮಾರ್ಕ್ಸಿಸ್ಟ್ ನಾಯಕ ಅಚ್ಚುತಾನಂದನ್ ಕೂಡ ಇದನ್ನೇ ಹೇಳಿರಲಿಲ್ಲವೇ?’’ಎಂದು ಆಕೆ ಪ್ರಶ್ನಿಸಿದ್ದಾರೆ.
ಹೆಚ್ಚಿನ ಆದಿವಾಸಿ ಪ್ರದೇಶಗಳ ಸ್ಥಳೀಯಾಡಳಿತಗಳು ಸಿಪಿಐ(ಎಂ) ಪಕ್ಷದ ಹಿಡಿತದಲ್ಲಿರುವುದರಿಂದ ಅವರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಮೋದಿಯವರನ್ನು ಟೀಕಿಸುತ್ತಿದ್ದಾರೆ, ಎಂದೂ ಅವರು ಹೇಳಿದ್ದಾರೆ.







