ಮುಸ್ಲಿಮ್ ಮಹಿಳೆಯ ಶಿರವಸ್ತ್ರ ಎಳೆದುದನ್ನು ಒಪ್ಪಿಕೊಂಡ: ‘‘ಅದನ್ನು ತೆಗೆಯಿರಿ, ಇದು ಅಮೆರಿಕ’’ ಎಂದಿದ್ದ

ವಾಶಿಂಗ್ಟನ್, ಮೇ 14: ಕಳೆದ ವರ್ಷದ ಡಿಸೆಂಬರ್‌ನಲ್ಲಿ ನ್ಯೂ ಮೆಕ್ಸಿಕೊಗೆ ಹೋಗುವ ವಿಮಾನವೊಂದರಲ್ಲಿ ಮುಸ್ಲಿಮ್ ಮಹಿಳೆಯೊಬ್ಬರ ಶಿರವಸ್ತ್ರವನ್ನು ಎಳೆದು ಹರಿದು ಹಾಕಿರುವುದನ್ನು ನಾರ್ತ್ ಕ್ಯಾರಲೈನದ ವ್ಯಕ್ತಿಯೊಬ್ಬನು ಶುಕ್ರವಾರ ಒಪ್ಪಿಕೊಂಡಿದ್ದಾನೆ. ‘‘ಅದನ್ನು ತೆಗೆ! ಇದು ಅಮೆರಿಕ!’’ ಎಂಬುದಾಗಿಯೂ ತಾನು ಆ ಸಂದರ್ಭದಲ್ಲಿ ಹೇಳಿದೆ ಎಂದು 37 ವರ್ಷದ ಗಿಲ್ ಪೇನ್ ಹೇಳಿದ್ದಾನೆ.
ಮಹಿಳೆಯೊಬ್ಬರು ಸ್ವತಂತ್ರವಾಗಿ ತನ್ನ ಧಾರ್ಮಿಕ ನಂಬಿಕೆಯ ಪ್ರಕಾರ ನಡೆದುಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ತಡೆಯಲು ತಾನು ಬಲ ಪ್ರಯೋಗಿಸಿರುವುದನ್ನು ನ್ಯೂ ಮೆಕ್ಸಿಕೊದ ಜಿಲ್ಲಾ ನ್ಯಾಯಾಲಯದಲ್ಲಿ ಆತ ಒಪ್ಪಿಕೊಂಡಿದ್ದಾನೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
‘‘ಧರ್ಮ ಯಾವುದೇ ಆಗಿರಲಿ, ಎಲ್ಲ ಅಮೆರಿಕನ್ನರಿಗೂ ತಮ್ಮ ಧಾರ್ಮಿಕ ನಂಬಿಕೆಯನ್ನು ಯಾವುದೇ ಒತ್ತಡಕ್ಕೆ ಸಿಲುಕದೆ ಶಾಂತಿಯುತವಾಗಿ ಆಚರಿಸಲು ಅವಕಾಶವಿದೆ’’ ಎಂದು ಅಮೆರಿಕದ ಕಾನೂನು ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥೆ ವನಿತಾ ಗುಪ್ತ ಹೇಳಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿಮಾನವು ಅಲ್ಬುಕರ್ಕ್‌ನಲ್ಲಿ ಇಳಿಯುವ ಸ್ವಲ್ಪವೇ ಮೊದಲು, ಮುಸ್ಲಿಂ ಮಹಿಳೆ ಕುಳಿತಿದ್ದ ಸ್ಥಳಕ್ಕೆ ಹೋಗಿ ಆಕೆಯ ಪಕ್ಕದಲ್ಲಿ ನಿಂತೆ ಎಂದು ಪೇನ್ ನ್ಯಾಯಾಲಯದಲ್ಲಿ ಹೇಳಿದನು. ನಿಮ್ಮ ಹಿಜಾಬನ್ನು ತೆಗೆಯಿರಿ ಎಂಬುದಾಗಿ ತಾನು ಆ ಮಹಿಳೆಗೆ ಸೂಚಿಸಿದೆ ಎಂದನು. ‘‘ಅದನ್ನು ತೆಗೆಯಿರಿ, ಇದು ಅಮೆರಿಕ’’ ಎಂಬಂಥ ಮಾತುಗಳನ್ನು ತಾನು ಹೇಳಿದೆ ಎಂದನು.
ಬಳಿಕ ಆತ ಹಿಜಾಬನ್ನು ಹಿಂದಿನಿಂದ ಬಲವಾಗಿ ಎಳೆದೆ ಎಂದು ಆರೋಪಿಯು ನ್ಯಾಯಾಲಯದಲ್ಲಿ ಒಪ್ಪಿಕೊಂಡನು.
‘‘ಇದರಿಂದಾಗಿ, ತನ್ಮ ಮೇಲೆ ಹಲ್ಲೆ ನಡೆದ ಭಾವನೆ ಆ ಮಹಿಳೆಯಲ್ಲಿ ಮೂಡಿತು. ಆಕೆ, ತಕ್ಷಣ ತನ್ನ ಹಿಜಾಬನ್ನು ಹಿಂದಕ್ಕೆ ಎಳೆದುಕೊಂಡರು ಹಾಗೂ ತನ್ನ ತಲೆಯನ್ನು ಮತ್ತೆ ಮುಚ್ಚಿಕೊಂಡರು’’ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿಕೆಯೊಂದರಲ್ಲಿ ತಿಳಿಸಿದರು.







