ಉಳ್ಳಾಲ ದರ್ಗಾ ಆವರಣದಲ್ಲಿ ಯಾವುದೇ ಹಲ್ಲೆ ಪ್ರಕರಣ ನಡೆದಿಲ್ಲ: ಅಬ್ದುರ್ರಶೀದ್ ಹಾಜಿ
ಮಂಗಳೂರು, ಮೇ14: ಉಳ್ಳಾಲ ಸಮೀಪದ ಅಳೇಕಲದ ನಿವಾಸಿ ಶಂಸುದ್ದೀನ್ ಎಂಬವರ ಮೇಲೆ ನಡೆದಿರುವ ಹಲ್ಲೆ ಸತ್ಯಕ್ಕೆ ದೂರವಾದದ್ದು ಎಂದು ಉಳ್ಳಾಲ ಹಝ್ರತ್ ಸೈಯದ್ ಮದನಿ ದರ್ಗಾ ಆಡಳಿತ ಸಮಿತಿ ‘ಅಧ್ಯಕ್ಷ’ ಅಬ್ದುಲ್ ರಶೀದ್ ಹಾಜಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಲ್ಲೆ ನಡೆದಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಯಾವುದೋ ದುರುದ್ದೇಶವನ್ನಿಟ್ಟುಕೊಂಡು ನೀಡಲಾಗಿದೆ. ಘಟನೆ ನಡೆದಿದೆ ಎನ್ನಲಾದ ಸಂಜೆ 4:15ರ ಸಮಯದಲ್ಲಿ, ಹಲ್ಲೆ ನಡೆಸಿರುವವರು ಎನ್ನಲಾದ ಸಮಿತಿ ಸದಸ್ಯರು ನಮ್ಮಿಂದಿಗೆ ಉಳ್ಳಾಲ ದರ್ಗಾ ಜುಮಾ ಮಸೀದಿಯಲ್ಲಿ ನಮಾಝ್‌ನಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 1:45ರ ಸಮಯದಲ್ಲಿ ಯಾವುದೋ ಕರಪತ್ರ ಹಂಚುವ ವಿಷಯದಲ್ಲಿ ಕೆಲವು ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವಿಷಯ ತಿಳಿದು ನಾವು ಅವರನ್ನು ಸಮಾಧಾನಿಸಿ ಕಳುಹಿಸಿಕೊಟ್ಟಿದ್ದೇವೆ. ಈ ಸಂದರ್ಭದಲ್ಲಿ ಉಳ್ಳಾಲ ಠಾಣಾಧಿಕಾರಿಯವರು ಸ್ಥಳದಲ್ಲಿ ಹಾಜರಿದ್ದರು. ಆ ಬಳಿಕ ದರ್ಗಾ ಪರಿಸರದಲ್ಲಿ ಯಾವುದೇ ಘಟನೆ ನಡೆದಿಲ್ಲ. ದರ್ಗಾ ಪರಿಸರದಲ್ಲಿರುವ ಸಿಸಿ ಕ್ಯಾಮರವನ್ನು ಪರಿಶೀಲಿಸುವಂತೆ ನಾವು ಪೊಲೀಸ್ ಅಧಿಕಾರಿಗಳಲ್ಲಿ ವಿನಂತಿಸಿದ್ದೇವೆ. ಈ ಬಗ್ಗೆ ಪೊಲೀಸ್ ಇಲಾಖೆ ನ್ಯಾಯ ಕೊಡುವ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಉಳ್ಳಾಲದ ಸುನ್ನೀ ಜಮಾಅತಿನ ಬಹುಜನರ ಬಹುಮತದಿಂದ ರಚನೆಯಾದ ನ್ಯಾಯೋಚಿತವಾದ ನೂತನ ಉಳ್ಳಾಲ ದರ್ಗಾ ಆಡಳಿತವನ್ನು ರದ್ದುಗೊಳಿಸುವ ಮತ್ತು ಅಪವಾದಕ್ಕೆ ಗುರಿ ಪಡಿಸುವ ಷಡ್ಯಂತ್ರದ ಸಲುವಾಗಿ ನಿರಂತರ ನಮ್ಮ ಸಮಿತಿ ಮತ್ತು ಪದಾಧಿಕಾರಿಗಳ ಮೇಲೆ ದಾಖಲಾಗುವ ಸುಳ್ಳು ಕೇಸಿನ ಬಗ್ಗೆ ನಮ್ಮ ಸಮಿತಿ ಈಗಾಗಲೆ ಪೊಲೀಸ್ ಅಧೀಕ್ಷಕರ ಮತ್ತು ನ್ಯಾಯಾಲಯದ ಸಮಕ್ಷಮಕ್ಕೆ ದೂರು ನೀಡಿ ನ್ಯಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







