ಮಾಲಿನ್ಯ ನಿಯಂತ್ರಣಾ ಮಂಡಳಿಯಿಂದ ನಗರದ ಆಸ್ಪತ್ರೆಗಳಿಗೆ ನೋಟಿಸ್

ಮಂಗಳೂರು, ಮೇ 14: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷಣ್ ಮೇ 11 ಮತ್ತು 12 ರಂದು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಮತ್ತು 4 ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಆಸ್ಪತ್ರೆಗಳಲ್ಲಿ ಕಂಡುಬಂದ ನ್ಯೂನತೆಯ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಪರಿಶೀಲನೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸಮರ್ಪಕ ಕಾರ್ಯವೆಸಗದೆ ಇರುವ ಬಗ್ಗೆ, ಜೀವ ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸುವ ಕೊಠಡಿಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡದೆ ಇರುವ ಬಗ್ಗೆ, ಜೀವ ವೈದ್ಯಕೀಯ ತ್ಯಾಜ್ಯಗಳಾದ ಐ.ವಿ. ಪ್ಲಾಸ್ಟಿಕ್ ಬಾಟಲ್ಸ್ ಮತ್ತು ಇತರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ನೀಡದೆ ಗುಜರಿ ವ್ಯಾಪಾರಿಗಳಿಗೆ ನೇರವಾಗಿ ನೀಡುತ್ತಿರುವುದು, ಐ.ವಿ ಬಾಟಲ್ಸ್ ಮತ್ತು ಇತರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರೆದ ಜಾಗದಲ್ಲಿ ಸಂಗ್ರಹಿಸುತ್ತಿರುವುದು, ಆಸ್ಪತ್ರೆಯ ಜೀವ ವೈದ್ಯಕೀಯ ದ್ರವ ತ್ಯಾಜ್ಯ ಶುದ್ದೀಕರಣ ಘಟಕಗಳನ್ನು ಅಳವಡಿಸದೆ ನೇರವಾಗಿ ಒಳಚರಂಡಿಗೆ ವಿಸರ್ಜಿಸುವುದು ಗಮನಕ್ಕೆ ಬಂದಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕವು ಕಾರ್ಯನಿರ್ವಹಿಸದೆ ಇರುವುದು ಮತ್ತು ಘನತ್ಯಾಜ್ಯಗಳನ್ನು ತೆರೆದ ಜಾಗದಲ್ಲಿ ಸಂಗ್ರಹಿಸಿರುವುದು ಗಮನಕ್ಕೆ ಬಂದಿದೆ. ಜಿಲ್ಲಾ ಆಸ್ಪತ್ರೆ ಮತ್ತು 4 ಖಾಸಗಿ ಆಸ್ಪತ್ರೆಗಳಿಗೆ ನ್ಯೂನತೆಗಳನ್ನು ಕೂಡಲೆ ಸರಿಪಡಿಸುವಂತೆ ನಿರ್ದೇಶನ ನೀಡಲಾಯಿತು.
ಹೊಸ ವೈದ್ಯಕೀಯ ನಿರ್ವಹಣೆ ನಿಯಮ 2016ರಡಿಯಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲು ಸೂಚನೆ ನೀಡಲಾಯಿತು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ವಿಭಾಗದ ಪರಿಸರ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







