ಮೇಲ್ಜಾತಿಯ ಯುವತಿಯೊಂದಿಗೆ ಪರಾರಿಯಾದ ದಲಿತನ ಸೋದರಿಯ ಬರ್ಬರ ಹತ್ಯೆ

ತಿರುನೆಲ್ವೆಲಿ,ಮೇ 14: ಶಂಕಿತ ಗೌರವ ಹತ್ಯೆ ಪ್ರಕರಣವೊಂದರಲ್ಲಿ ಶುಕ್ರವಾರ 27ರ ಹರೆಯದ ದಲಿತ ಮಹಿಳೆಯನ್ನು ಆಕೆಯ ಪುಟ್ಟಮಗುವಿನ ಎದುರಿನಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ ಮಹಿಳೆಯ ಸೋದರ ಮೇಲ್ಜಾತಿಯ ಯುವತಿಯೊಂದಿಗೆ ಪರಾರಿಯಾಗಿದ್ದು ಈ ಹತ್ಯೆಗೆ ಕಾರಣವೆನ್ನಲಾಗಿದೆ.
ಪಾಳ್ಯಂಕೊಟ್ಟೈ ಪೊಲೀಸ್ ಠಾಣಾ ವ್ಯಾಪ್ತಿಯ ವಣ್ಣಾರಪೇಟ್‌ನ ಇಳಂಗೊ ನಗರದ ನಿವಾಸಿ,ರೈಲ್ವೆಯಲ್ಲಿ ಗೇಟ್‌ಕೀಪರ್ ಆಗಿರುವ ದಲಿತ ಎಸ್.ವಿಶ್ವನಾಥನ್(29) ಥಚನಲ್ಲೂರಿನ ಮೇಲ್ಜಾತಿಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಸ್.ಕಾವೇರಿ(23)ಯನ್ನು ಪ್ರೀತಿಸುತ್ತಿದ್ದ. ನಾಲ್ಕು ತಿಂಗಳ ಹಿಂದೆ ಅವರಿಬ್ಬರೂ ರಿಜಿಸ್ಟರ್ಡ್ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ಕಾವೇರಿಯ ಕೊನೆಯ ಸೆಮಿಸ್ಟರ್ ಪರೀಕ್ಷೆ ಇತ್ತೀಚಿಗೆ ಮುಗಿದಿದ್ದು, ಮೇ 3ರಂದು ಆಕೆ ವಿಶ್ವನಾಥನ್ ಜೊತೆ ಪರಾರಿಯಾಗಿದ್ದಳು. ಇದರಿಂದ ಕ್ರುದ್ಧರಾಗಿದ್ದ ಆಕೆಯ ಸಂಬಂಧಿಕರು ಜೋಡಿಯ ಹುಡುಕಾಟದಲ್ಲಿ ತೊಡಗಿದ್ದರು.
ಕಾವೇರಿಯ ತಂದೆ ಶಂಕರನಾರಾಯಣನ್ ವಿಶ್ವನಾಥನ್ ಮನೆಗೆ ಭೇಟಿ ನೀಡಿ ಪರಾರಿಯಾಗಿರುವ ಜೋಡಿಯನ್ನು ಪತ್ತೆ ಹಚ್ಚಿ ತನಗೊಪ್ಪಿಸುವಂತೆ ಮನೆಮಂದಿಗೆ ಬೆದರಿಕೆಯೊಡ್ಡಿದ್ದ. ವಿಶ್ವನಾಥನ್ ತಂದೆ ಷಣ್ಮುಗವೇಲು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿ ಪೊಲೀಸ್ ದೂರನ್ನು ದಾಖಲಿಸಿದ್ದರು.
ಶುಕ್ರವಾರ ಮಧ್ಯಾಹ್ನ ಮತ್ತೆ ಷಣ್ಮುಗವೇಲು ಮನೆಗೆ ಬಂದಿದ್ದ ಶಂಕರನಾರಾಯಣನ್ ವಿಶ್ವನಾಥನ್‌ನ ಸೋದರಿ ಎಸ್ ಕಲ್ಪನಾಳೊಂದಿಗೆ ಮಾತಿನ ಚಕಮಕಿಯ ನಂತರ ಆಕೆಯನ್ನು ಕತ್ತಿಯಿಂದ ಕಡಿದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಕಲ್ಪನಾಳನ್ನು ನೆರೆಕರೆಯವರು ಸಮೀಪದ ಆಸ್ಪತ್ರೆಗೊಯ್ದು ಬಳಿಕ ತಿರುನೆಲ್ವೆಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದರಾದರೂ ಆಕೆ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಳು.





