ರೋಹಿತ್ ಹತ್ಯೆ ಪ್ರಕರಣ: ಮೂವರು ಸಹೋದರರ ಸಹಿತ ನಾಲ್ವರ ಬಂಧನ
ಮಂಗಳೂರು, ಮೇ 14: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಮೇ 8 ರಂದು ರೋಹಿತ್ (42) ಎಂಬಾತನನ್ನು ಹತ್ಯೆ ಮಾಡಿದ ಮೂವರು ಸಹೋದರರು ಸೇರಿದಂತೆ ನಾಲ್ಕು ಮಂದಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕದ್ರಿ ದೇವಸ್ಥಾನದ ಬಳಿಯ ಕೆ. ಮಾಧವ ಎಂಬವರ ಪುತ್ರರಾದ ಜಗದೀಶ್(36),ಯಶವಂತ(40), ಶಿವಾಜಿ(35) ಮತ್ತು ಕಂಡೆಟ್ಟುವಿನ ದಿ .ವಿಜೇಂದ್ರನಾಥ್ ಎಂಬವರ ಪುತ್ರ ಗೌತಮ್‌ಚಂದ್ರ(30) ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಜಗದೀಶ್ ,ಯಶವಂತ ಮತ್ತು ಶಿವಾಜಿ ಸಹೋದರರಾಗಿದ್ದಾರೆ. ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ
ಕದ್ರಿಯಲ್ಲಿ ಟೀ ಸ್ಟಾಲ್‌ವೊಂದನ್ನು ಹೊಂದಿರುವ ರೋಶನ್ ಮೇ 8 ರಂದು ಸಂಜೆ ತನ್ನ ಸ್ನೇಹಿತ ರೋಹಿತ್‌ನೊಂದಿಗೆ ಬಿಜೈಯಿಂದ ಎ.ಜೆ ಆಸ್ಪತ್ರೆ ಕಡೆ ತೆರಳುತ್ತಿದ್ದ ಸಂದರ್ಭ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಅಟೋ ರಿಕ್ಷಾದಲ್ಲಿ ಆಗಮಿಸಿದ ಮೂವರ ತಂಡ ಕಲ್ಲು, ದೊಣ್ಣೆ ಹಾಗೂ ಚೂರಿಯಿಂದ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ರೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ರೋಶನ್ ಅವರ ಬೆನ್ನು ಹಾಗೂ ಬಲಗೈ ಬೆರಳುಗಳಿಗೆ ಇರಿತವಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.







