ಬಸವಣ್ಣನವರ ವಿಚಾರಧಾರೆಗಳು ಸಾರ್ವಕಾಲಿಕ: ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

ಕುಶಾಲನಗರ, ಮೇ 14: ಬಸವಣ್ಣನವರ ವಿಚಾರಧಾರೆಗಳು ಹಾಗೂ ದೂರದೃಷ್ಟಿ ಸಾರ್ವಕಾಲಿಕವಾಗಿವೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.
ಅವರು ವೀರಶೈವ ಸಮಾಜದ ಆಶ್ರಯದಲ್ಲಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12ನೆ ಶತಮಾನದಲ್ಲಿಯೇ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಕ್ರಾಂತಿಕಾರಿ ಬಸವಣ್ಣ, ಸಮಾಜದ ಸಮಗ್ರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಶ್ರಮಿಸಿದ ಬಸವಣ್ಣ ನವರ ಸಂದೇಶಗಳು ಜಗತ್ತಿನೆಲ್ಲೆಡೆ ವಿಸ್ತಾರಗೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಯ ಸಾದ್ಯವಿದೆ ಎಂದರು.
ಕಾರ್ಯಕ್ರಮದ ಕುರಿತು ಚಿಕ್ಕಮಗಳೂರಿನ ಸಾಹಿತಿ ಮಹೇಶ್ ಚಟ್ನಳ್ಳಿ ಉಪನ್ಯಾಸ ನೀಡಿ, ಸಮಾಜದಲ್ಲಿ ಅಸಮಾನತೆ, ಪುರೋಹಿತಶಾಹಿತ್ವ, ಜಾತಿ ಪದ್ಧತಿ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಗಾವಡಗೆರೆ ದೇವರ ಮಠದ ಪೀಠಾಧ್ಯಕ್ಷರಾದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ವಕೀಲ ಎಚ್.ಎಸ್.ಚಂದ್ರವೌಳಿ ಮಾತನಾಡಿದರು.
ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಸಿಡಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಅರಕಲಗೂಡಿನ ಜಯದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಡಗು ಜಿಪಂ ಸದಸ್ಯೆ ಕುಮುದಾ ಧರ್ಮಪ್ಪ, ಕುಶಾಲನಗರ ಪಪಂ ಸದಸ್ಯರಾದ ಮಧುಸೂದನ್, ವೀರಶೈವ ಸಮಾಜ ಕೊಡಗು ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ, ಮಾಹಿತಿ ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್, ವೀರಶೈವ ಸಮಾಜ ಸೋಮವಾರಪೇಟೆ ಅಧ್ಯಕ್ಷ ಸಿ.ವಿ.ವಿಶ್ವನಾಥ್, ವಿರಾಜಪೇಟೆ ಅಧ್ಯಕ್ಷ ಸಂದೀಪ್, ಅಕ್ಕನ ಬಳಗದ ಅಧ್ಯಕ್ಷೆ ವಿಜಯಪಾಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
ಹೇಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹನಾ ಹಾಗೂ ತಂಡ ಪ್ರಾರ್ಥಿಸಿ, ವಿರೂಪಾಕ್ಷ ಸ್ವಾಗತಿಸಿದರು. ಕುಮಾರ್ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೈಚನಹಳ್ಳಿಯ ಬಸವೇಶ್ವರ ದೇವಾಲಯದಿಂದ ತೆರೆದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಳಶ ಹೊತ್ತ ಮಹಿಳೆಯರು, ವೀರಗಾಸೆ ಕುಣಿತ, ವಾದ್ಯಗೋಷ್ಠಿ, ನಂದಿ ದ್ವಜ ಕುಣಿತ ಜನರನ್ನು ಆಕರ್ಷಿಸಿತು.







