ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸ ನಮ್ಮಿಂದಾಗಬೇಕು: ಡಾ.ಎಲ್.ಎಚ್. ಮಂಜುನಾಥ್

ಉಪ್ಪಿನಂಗಡಿ, ಮೇ 13: ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸ ನಮ್ಮಿಂದಾಗಬೇಕು. ಪೀಳಿಗೆಯಿಂದ ಪೀಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟರೆ ಅದು ನಿರಂತರವಾಗಿರುವುದಲ್ಲದೆ, ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಹಾಗೂ ಸಂಸ್ಕಾರವೆನ್ನುವುದು ಒಂದೇ ರಥದ ಎರಡು ಚಕ್ರಗಳಿದ್ದ ಹಾಗೆ. ಇವೆರಡು ಸರಿಯಾಗಿದ್ದರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಘದ ಸದಸ್ಯರ ಯೋಜನೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂಘದಿಂದ ಇಂದು ಮಹಿಳಾ ಸ್ಥಾನಮಾನ ಹೆಚ್ಚಿದ್ದು, ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವಂತಾಗಿದೆ. ಇದಕ್ಕೆ ಒಕ್ಕೂಟದ ಪದಾಧಿಕಾರಿಗಳ ಸಹಕಾರವೂ ಕಾರಣ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ವಹಿಸಿದ್ದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಪುತ್ತೂರು ವಲಯದ ಯೋಜನಾಧಿಕಾರಿ ಧರ್ನಪ್ಪ ಮೂಲ್ಯ, ಉದ್ಯಮಿ ಧನ್ಯಕುಮಾರ್ ರೈ, ಒಕ್ಕೂಟದ ನೂತನ ಅಧ್ಯಕ್ಷ ಮಾಧವ, ಸೇವಾ ಪ್ರತಿನಿಧಿ ಉಷಾ ಹರೀಶ್, ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ಪೂಜಾರಿ, ಉಪಾಧ್ಯಕ್ಷೆ ಭಾರತಿ, ಕಾರ್ಯದರ್ಶಿ ಜಯಂತಿ, ಪದಾಧಿಕಾರಿಗಳಾದ ಶಶಿಕಲಾ, ಸಂಜೀವ ಮಡಿವಾಳ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಧವ, ಉಪಾಧ್ಯಕ್ಷರಾಗಿ ಗೀತಾ, ಜೊತೆ ಕಾರ್ಯದರ್ಶಿಯಾಗಿ ಲೀಲಾವತಿ, ಕಾರ್ಯದರ್ಶಿಯಾಗಿ ಸುಮಿತ್ರ, ಕೋಶಾಧಿಕಾರಿಯಾಗಿ ಶೀನಪ್ಪ ನಾಯ್ಕ ಪದಗ್ರಹಣ ಸ್ವೀಕರಿಸಿದರು.
ಪೌಷ ಪಾತಾಳ ಪ್ರಾರ್ಥಿಸಿದರು. ಯೋಜನೆಯ ಮೇಲ್ವಿಚಾರಕ ಶೇಖರ್ ಜೆ. ಸ್ವಾಗತಿಸಿದರು. ರಮೇಶ್ ರಂಗಾಜೆ ವಂದಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷ ಲೋಕೇಶ್ ಬೆತ್ತೋಡಿ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.







