ಅಂಜು ಬಾಬ್ಬಿ ಜಾರ್ಜ್ ಫೌಂಡೇಶನ್ ಲೋಗೊ ಅನಾವರಣ

ಬೆಂಗಳೂರು,ಮೇ 14: ಲಾಂಗ್‌ಜಂಪ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಅಮೆರಿಕದ ಅಥ್ಲೀಟ್ ದಂತಕತೆ ಮೈಕ್ ಪೊವೆಲ್ ಶನಿವಾರ ಇಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಂಜು ಬಾಬಿ ಜಾರ್ಜ್ ಸ್ಪೋರ್ಟ್ಸ್ ಫೌಂಡೇಶನ್‌ನ ಲಾಂಛನವನ್ನು ಅನಾವರಣಗೊಳಿಸಿದರು.
ತಳ ಮಟ್ಟದಲ್ಲಿ ಪ್ರತಿಭೆಯನ್ನು ಅನ್ವೇಷಿಸುವುದು ಫೌಂಡೇಶನ್‌ನ ಮುಖ್ಯ ಗುರಿ. ಪ್ರಮುಖವಾಗಿ ಟ್ರಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳಿಗೆ ಉತ್ತೇಜನ ನೀಡುವುದು, ಕ್ರೀಡೆಗಳನ್ನು ಪ್ರಚಾರ ಪಡಿಸುವುದು ಇದರ ಉದ್ದೇಶವಾಗಿದೆ. ಅತ್ಯಂತ ಬಡವರ್ಗದ ಯುವ ಪ್ರತಿಭಾವಂತ ಕ್ರೀಡಾಳುಗಳಿಗೆ ಹಾಗೂ ಅಶಕ್ತ ಮಹಿಳೆಯರಿಗೆ ನೆರವು ನೀಡುವುದು ಫೌಂಡೇಶನ್ ಗುರಿಯಾಗಿದೆ.
ಫೌಂಡೇಶನ್‌ನ ಮೊದಲ ಬ್ಯಾಚ್‌ನ ಅಥ್ಲೀಟ್‌ಗಳು ಜೂ.1 ರಿಂದ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಆರಂಭಿಸುವರು. ಮೊದಲ ಹಂತದಲ್ಲಿ ಅಂಜು ಜಾರ್ಜ್ ಹಾಗೂ ಬಾಬಿ ಜಾರ್ಜ್ ಹೈ ಜಂಪ್‌ನ ಬಗ್ಗೆ ಕೋಚಿಂಗ್ ನೀಡಲಿದ್ದಾರೆ.
ಅಂಜು ಬಾಬಿ ಸ್ಪೋರ್ಟ್ಸ್ ಫೆಡರೇಶನ್ ಲಾಭರಹಿತ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಅಂಜು ಚೇರ್‌ಪರ್ಸನ್ ಆಗಿದ್ದರೆ, ಅವರ ಪತ್ನಿ ಬಾಬಿ ಜಾರ್ಜ್ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದಾರೆ.





