ಕಾಶ್ಮೀರ ವಿಶ್ವದಲ್ಲೇ 2ನೆಯ ಶೃಂಗಾರ ಧಾಮ!

ಶ್ರೀನಗರ, ಮೇ 14: ಕಾಶ್ಮೀರದಲ್ಲಿ ಶೃಂಗಾರ ಋತುವು ಅಕ್ಷರಶಃ ಮತ್ತೆ ಬಂದಿದೆ. ಖ್ಯಾತ ಪ್ರವಾಸೋದ್ಯಮ ನಿಯತಕಾಲಿಕ ‘ಲೋನ್ಲಿ ಪ್ಲಾನೆಟ್’ ರಾಜ್ಯಕ್ಕೆ ಭಾರತದಲ್ಲೇ ಅತ್ಯುತ್ತಮ ಶೃಂಗಾರ ಸ್ಥಳವೆಂದು ರ್ಯಾಂಕ್ ನೀಡಿದೆ.
ಭೂಮಿಯ ಸ್ವರ್ಗವೆಂದೇ ಖ್ಯಾತಿ ಗಳಿಸಿರುವ ಕಾಶ್ಮೀರವು, ಸ್ವಿಟ್ಝರ್‌ಲೆಂಡ್‌ನ ಬಳಿಕ ವಿಶ್ವದಲ್ಲೇ ಅತ್ಯುತ್ತಮ ಶೃಂಗಾರಮಯ ಸ್ಥಳವೆಂಬ ರ್ಯಾಂಕ್ ಗಳಿಸಿದೆ.
ಕಾಶ್ಮೀರದ ಗಾಳಿಯಲ್ಲಿರುವ ಶೃಂಗಾರವು ತಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಬರುವಂತೆ ಮಾಡುತ್ತಿದೆಯೆಂದು ಕಣಿವೆಗೆ ಭೇಟಿ ನೀಡುವ ಪ್ರವಾಸಿಗರು ಹೇಳುತ್ತಿದ್ದಾರೆ.
ಕಾಶ್ಮೀರವು ಸದಾ ದಂಗೆಗ್ರಸ್ತವೆಂಬ ಭಾವನೆಯು ಪ್ರವಾಸಿಗರನ್ನು ದಾಲ್ ಸರೋವರದಲ್ಲಿ ವಿಹರಿಸಲು ಶಿಕಾರಾ ದೋಣಿಗಳನ್ನು ಕಾಯ್ದಿರಿಸುವುದರಿಂದ ತಡೆದಿಲ್ಲ. ಕಾಶ್ಮೀರವನ್ನು ಸುರಕ್ಷಿತ ಹಾಗೂ ಆರಾಮದಾಯಕ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಸರಕಾರಗಳ ಅನೇಕ ವರ್ಷಗಳ ಸತತ ಪ್ರಯತ್ನ ಫಲ ನೀಡತೊಡಗಿದೆ. ಶ್ರೀನಗರಕ್ಕೆ ದಿನವಹಿ ಸುಮಾರು 4 ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದಾರೆ.
‘‘ನಾವಿಲ್ಲಿಗೆ 1999ರಲ್ಲಿ ಬಂದಿದ್ದೆವು. 18 ವರ್ಷ ಗಳ ಬಳಿಕ ಈಗ ನಾನು ಮಕ್ಕಳೊಡನೆ ಇಲ್ಲಿಗೆ ಪುನಃ ಬಂದಿದ್ದೇನೆ. ಇದು ನಿಜವಾಗಿಯೂ ಸುಂದರ ಸ್ಥಳ. ಇದಕ್ಕಿಂತ ಒಳ್ಳೆಯ ಸ್ಥಳ ಬೇರೆಲ್ಲೂ ಕಾಣಲಾರಿರಿ’’ ಎಂದು ಮುಂಬೈಯಿಂದ ಬಂದಿರುವ ಜಯೇಶ್ ಎಂಬ ಪ್ರವಾಸಿ ಕೊಂಡಾಡಿದ್ದಾರೆ.
ಕಾಶ್ಮೀರಕ್ಕೆ ಉಗ್ರವಾದ ಅಪ್ಪಳಿಸುವ ಮೊದಲು ಬಾಲಿವುಡ್ ಸಿನೆಮಾಗಳ ಶೃಂಗಾರ ದೃಶ್ಯಗಳೆಲ್ಲ ಕಾಶ್ಮೀರ ಭೂದೃಶ್ಯದಿಂದ ಚೆಲುವನ್ನು ಪಡೆಯುತ್ತಿದ್ದವು. ಸಿನೆಮಾ ಉದ್ಯಮ ಸೃಷ್ಟಿಸಿದ ಜನಜಂಗುಳಿಯಿಂದ ಕಣಿವೆಗೆ ಲಾಭವಾಗುತ್ತಿತ್ತು. ಈಗ ‘ಲೋನ್ಲಿ ಪ್ಲಾನೆಟ್’ನ ಹಣೆಪಟ್ಟಿ ಆಶಾವಾದವನ್ನು ಪುನರುಜ್ಜೀವಗೊಳಿಸಿದೆ.







