ಬಿಜೆಪಿ ಗೆಲುವಿಗೆ ಮತದಾರ ಅವಕಾಶ ನೀಡಲಾರ: ಸಚಿವ ರೈ
ಕಾಸರಗೋಡು, ಮೇ 14: ಬಿಜೆಪಿ ಗೆಲುವು ಸಾಧಿಸಿದರೆ ಶಾಂತಿಪ್ರಿಯ ನಾಡಿನಲ್ಲಿ ಅಶಾಂತಿ ತಲೆದೋರಬಹುದು. ಹಾಗಾಗಿ ಮಂಜೇಶ್ವರ ಹಾಗೂ ಕಾಸರಗೋಡಿನ ಮತದಾರರು ಬಿಜೆಪಿಯ ಗೆಲುವಿಗೆ ಅವಕಾಶ ನೀಡಲಾರರು ಎಂದು ಕರ್ನಾಟಕ ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಂಜೇಶ್ವರ ಸೇರಿದಂತೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಯುಡಿಎಫ್ ಪರ ಜನತೆ ಒಲವು ತೋರುತ್ತಿದ್ದಾರೆ. ಮಂಜೇಶ್ವರ, ಕಾಸರಗೋಡು ಕ್ಷೇತ್ರವನ್ನು ಯುಡಿಎಫ್ ಉಳಿಸಿಕೊಳ್ಳಲಿದೆ. ಇದರ ಜೊತೆಗೆ ಉದುಮ, ತ್ರಿಕ್ಕರಿಪುರದಲ್ಲೂ ಕೂಡಾ ಯುಡಿಎಫ್ ಗೆಲ್ಲಲಿದೆ. ಕಾಂಞಂಗಾಡ್‌ನಲ್ಲಿ ಪ್ರಬಲ ಸ್ಪರ್ಧೆ ನೀಡುತ್ತಿದೆ. ಐದು ವರ್ಷಗಳ ಅವಧಿಯಲ್ಲಿ ಉಮ್ಮನ್ ಚಾಂಡಿ ನೇತೃತ್ವದ ಸರಕಾರದ ಅಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. ಜಿಲ್ಲೆಗೂ ಹಲವಾರು ಕೊಡುಗೆ ನೀಡಿದ್ದಾರೆ ಎಂದು ರೈ ಹೇಳಿದರು. ಕರ್ನಾಟಕ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮೋಹನ್‌ಚಂದ್ರ ನಂಬಿಯಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಪಿ.ಎ. ಅಶ್ರಫ್ ಅಲಿ, ಕೇಶವ ಪ್ರಸಾದ್ ನಾಣಿಹಿತ್ಲು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





