ಪಚೌರಿ ವಿರುದ್ಧ ವಿಚಾರಣೆ ನಡೆಸಲು ಸಾಕ್ಷಾಧಾರಗಳಿವೆ: ದಿಲ್ಲಿ ಕೋರ್ಟ್

ದಿಲ್ಲಿ, ಮೇ 14: ಮಾಜಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮಿತಿಯ ಮಾಜಿ ಅಧ್ಯಕ್ಷ ಆರ್.ಕೆ ಪಚೌರಿ ವಿರುದ್ಧ ವಿಚಾರಣೆ ನಡೆಸಲು ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ಇಲ್ಲಿಯ ಮಹಾನಗರ ನ್ಯಾಯಾಲಯವು ಶನಿವಾರ ಹೇಳಿದೆ.
ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯನ್ನು ಪರಿಗಣಿಸಿದ ನ್ಯಾ.ಶಿವಾನಿ ಚೌಹಾಣ್ ಅವರು ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿಗೊಳಿಸಿದರು.
75ರ ಪ್ರಾಯದ ಪರಿಸರತಜ್ಞ ಪಚೌರಿ ತಪ್ಪಿತಸ್ಥರೆಂದು ಸಾಬೀತಾದರೆ ಏಳು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗಬಹುದು. ಸ್ಥಳೀಯ ನ್ಯಾಯಾಲಯದಿಂದ 2015ರಲ್ಲಿ ಜಾಮೀನು ಪಡೆದುಕೊಂಡಿರುವ ಪಚೌರಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಟೆರಿಯ ಮಾಜಿ ಕಾರ್ಯಾಧ್ಯಕ್ಷರಾಗಿದ್ದು,30 ವರ್ಷಗಳ ಸೇವೆಯ ಬಳಿಕ ಕಳೆದ ವರ್ಷ ತನ್ನ ಹುದ್ದೆಗೆ ರಾಜೀನಾಮೆ ನೀಡಿರುವ ಪಚೌರಿ ಆ ಸಂಸ್ಥೆಯಲ್ಲಿ ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 29ರ ಹರೆಯದ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸರು 23 ಸಾಕ್ಷಿಗಳ ಜೊತೆಗೆ ಪಚೌರಿ ಮತ್ತು ಫಿರ್ಯಾದಿ ಮಹಿಳೆಯ ನಡುವಿನ ಹಲವಾರು ಎಸ್‌ಎಂಎಸ್‌ಗಳು, ಇ-ಮೇಲ್‌ಗಳು ಮತ್ತು ವಾಟ್ಸ್‌ಆ್ಯಪ್ ಸಂದೇಶಗಳನ್ನು 1,400 ಪುಟಗಳ ತಮ್ಮ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಪಚೌರಿ ವಿರುದ್ಧ ಕಳೆದ ಫೆಬ್ರವರಿಯಲ್ಲಿ ಈ ಪ್ರಕರಣ ದಾಖಲಾದ ಬಳಿಕ ಇನ್ನೂ ಇಬ್ಬರು ಮಹಿಳೆಯರು ಟೆರಿಯಲ್ಲಿ ಅವರು ತಮಗೂ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದಾರೆ.





