ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ
ಕಾಸರಗೋಡು, ಮೇ 14: ಕೇರಳ ವಿಧಾನ ಸಭೆಗೆ ಮೇ 16ರಂದು ನಡೆಯುವ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯಗೊಂಡಿತು. ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಶನಿವಾರ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಯಿತು. ಬಹಿರಂಗ ಪ್ರಚಾರದ ಅಂತ್ಯದಲ್ಲಿ ಬಲಾಬಲ ಪ್ರದರ್ಶನಕ್ಕೆ ಆಯಾ ಪಕ್ಷಗಳಿಗೆ ಸ್ಥಳ ನಿಗದಿಪಡಿಸಲಾಗಿತ್ತು.
ಕಾಸರಗೋಡಿನ ಐಕ್ಯರಂಗದ ಅಭ್ಯರ್ಥಿ ಎನ್.ಎ. ನೆಲ್ಲಿಕುನ್ನುರವರ ಪ್ರಚಾರ ಸಮಾರೋಪ ಹೊಸ ಬಸ್ ನಿಲ್ದಾಣ ಪರಿಸರ, ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿಯ ಪ್ರಚಾರ ಸಮಾರೋಪ ಮುಳ್ಳೇರಿಯ, ಎಡರಂಗ ಅಭ್ಯರ್ಥಿ ಎ.ಎ. ಅಮೀನ್‌ರ ಪ್ರಚಾರ ಸಮಾರೋಪ ಹೊಸ ಬಸ್ ನಿಲ್ದಾಣ ಪರಿಸರದ ಪಿ.ಬಿ. ಮೈದಾನದಲ್ಲಿ ನಡೆಯಿತು.
ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್‌ರ ಪ್ರಚಾರ ಉಪ್ಪಳದಲ್ಲಿ, ಎಡರಂಗ ಅಭ್ಯರ್ಥಿ ಸಿ.ಎಚ್.ಕುಂಞಂಬು ಮತ್ತು ಬಿಜೆಪಿ ಅಭ್ಯರ್ಥಿ ಕೆ .ಸುರೇಂದ್ರನ್‌ರ ಪ್ರಚಾರ ಸಮಾರೋಪ ಕುಂಬಳೆಯ ಪ್ರತ್ಯೇಕ ಸ್ಥಳದಲ್ಲಿ ನಡೆಯಿತು. ಹೀಗೆ ಜಿಲ್ಲೆಯ 26 ಕೇಂದ್ರಗಳಲ್ಲಿ ಬಹಿರಂಗ ಪ್ರಚಾರದ ಸಮಾರೋಪ ನಡೆಯಿತು. ಈ ಬಾರಿ ಪ್ರಚಾರಕ್ಕೆ ಪಕ್ಷಗಳಿಗೆ ಎರಡು ತಿಂಗಳ ಸಮಯ ಲಭಿಸಿತ್ತು. ಬಹಿರಂಗ ಪ್ರಚಾರದ ಸಮಾರೋಪದ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.





