ಮೂರು ಕಂಟೇನರ್‌ಗಳಲ್ಲಿ ಸಾಗಿಸುತ್ತಿದ್ದ 570 ಕೋ.ರೂ.ವಶ

ತಿರುಪುರ ಬಳಿ ತಮಿಳುನಾಡು ಚುನಾವಣಾಧಿಕಾರಿಗಳ ಕಾರ್ಯಾಚರಣೆ
ಚೆನ್ನೈ,ಮೇ 14: ಚುನಾವಣೆ ಸಂದರ್ಭ ಅಕ್ರಮ ಹಣ ಸಾಗಣೆಯನ್ನು ತಡೆಯಲೆಂದೇ ರಚಿಸಲಾಗಿರುವ ಸಂಚಾರಿ ದಳದ ಅಧಿಕಾರಿಗಳು ಶನಿವಾರ ಬೆಳಗಿನ ಜಾವ ತಿರುಪುರ ಸಮೀಪದ ಚೆಂಗಪಲ್ಲಿಯಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂರು ಕಂಟೇನರ್ ಟ್ರಕ್‌ಗಳಲ್ಲಿ ಸಾಗಿಸಲಾಗುತ್ತಿದ್ದ ಒಟ್ಟು 570 ಕೋ.ರೂ.ನಗದು ಹಣವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿಯಿರುವಂತೆ ಅಧಿಕಾರಿಗಳು ಈ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ.
ಈ ಹಣ ಎಸ್‌ಬಿಐಗೆ ಸೇರಿದ್ದೆನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಟ್ರಕ್‌ಗಳಲ್ಲಿದ್ದ ಭದ್ರತಾ ಕಾವಲುಗಾರರು ಮೂಲ ದಾಖಲೆಗಳನ್ನು ಹೊಂದಿರಲಿಲ್ಲ, ಅವರ ಬಳಿ ಝೆರಾಕ್ಸ್ ಪ್ರತಿಗಳು ಮಾತ್ರ ಇದ್ದವು. ಇದು ಶಂಕೆಯನ್ನು ಮೂಡಿಸಿರುವುದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. ಇದಕ್ಕಾಗಿ ಆದಾಯ ತೆರಿಗೆ ಮತ್ತು ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ರಾಜೇಶ ಲಖೋನಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಆದರೆ, ವಶಪಡಿಸಿಕೊಳ್ಳಲಾಗಿರುವ 570 ಕೋ.ರೂ.ಮೇಲ್ನೋಟಕ್ಕೆ ಶಂಕಿತ ಹಣವಾಗಿದ್ದು ಯಾವುದೇ ಏಜೆನ್ಸಿ ಅಥವಾ ಸಂಸ್ಥೆ ಈ ಹಣ ತನ್ನದೆಂದು ಹಕ್ಕು ಮಂಡಿಸಿಲ್ಲ ಎಂದು ಚುನಾವಣಾ ಆಯೋಗವು ದಿಲ್ಲಿಯಲ್ಲಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಮರ್ಪಕ ತನಿಖೆ ನಡೆಯುವಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಯೋರ್ವರು ತಿಳಿಸಿದರು. ಚುನಾವಣಾ ಇಲಾಖೆಯ ಸಂಚಾರಿ ದಳವು ಅರೆ ಮಿಲಿಟರಿ ಪಡೆ ಸಿಬ್ಬಂದಿಯೊಂದಿಗೆ ಪೆರುಮಲನ್ನೂರು-ಕುನತ್ತೂರು ಬೈಪಾಸ್ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಭಾರೀ ಹಣ ಪತ್ತೆಯಾಗಿದೆ.
ಸೂಚನೆ ನೀಡಿದರೂ ಟ್ರಕ್‌ಗಳು ನಿಲ್ಲದಿದ್ದಾಗ ಅವುಗಳನ್ನು ಬೆನ್ನಟ್ಟಿ ಚೆಂಗಪಲ್ಲಿ ಬಳಿ ತಡೆದು ನಿಲ್ಲಿಸಲಾಯಿತು ಎಂದು ಅವರು ತಿಳಿಸಿದರು.
ಟ್ರಕ್‌ಗಳಿಗೆ ಬೆಂಗಾವಲಾಗಿದ್ದ ಮೂರು ಕಾರುಗಳಲ್ಲಿದ್ದವರು ತಾವು ಮಫ್ತಿಯಲ್ಲಿರುವ ಆಂಧ್ರಪ್ರದೇಶ ಪೊಲೀಸರಾಗಿದ್ದು, ಹಣವನ್ನು ಕೊಯಮತ್ತೂರಿನ ಎಸ್‌ಬಿಐನಿಂದ ವಿಶಾಖ ಪಟ್ಟಣಕ್ಕೆ ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅವರು ಯಾವುದೇ ದಾಖಲೆಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿದ್ದರಿಂದ ವಾಹನಗಳನ್ನು ತಿರುಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರವಕುರಿಚಿಯಲ್ಲಿ ಮತದಾನ ಮುಂದೂಡಿಕೆ
ಚೆನ್ನೈ, ಮೇ 14: ಮತದಾರರಿಗೆ ಹಣ ವಿತರಣೆಯ ದೂರುಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಶನಿವಾರ ತಮಿಳುನಾಡಿನ ಅರವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವನ್ನು ಮೇ 23ಕ್ಕೆ ಮುಂದೂಡಿದೆ. ಈ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಮೇ 19ರ ಬದಲು ಮೇ 25ರಂದು ಮತ ಎಣಿಕೆ ನಡೆಯಲಿದೆ. ಎ.22ರಂದು ಅರವಕುರಿಚಿಯ ಮನೆಯೊಂದರ ಮೇಲೆ ದಾಳಿ ನಡೆಸಿ 4.77 ಕೋ.ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಒಟ್ಟು 1.30 ಕೋ.ರೂ.ವೌಲ್ಯದ ಸೀರೆಗಳು ಮತ್ತು ಪಂಚೆಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.







