ತನಿಖೆಗೆ ಸಿಟ್ ರಚಿಸುವಂತೆ ರಾಜನಾಥ್‌ಗೆ ಸುಬ್ರಮಣಿಯನ್ ಸ್ವಾಮಿ ಪತ್ರ
ಸುನಂದಾ ಪುಷ್ಕರ್ ಸಾವು

ಹೊಸದಿಲ್ಲಿ, ಮೇ 14: ಮಾಜಿ ಕೇಂದ್ರ ಸಚಿವ ಶಶಿ ತರೂರ್‌ರ ಪತ್ನಿ ಸುನಂದಾ ಪುಷ್ಕರ್‌ರ ನಿಗೂಢ ಸಾವಿನ ಕುರಿತು ತನಿಖೆಗಾಗಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖೆ ತಂಡವೊಂದನ್ನು(ಸಿಟ್) ನೇಮಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರ ಮಧ್ಯಪ್ರವೇಶವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೋರಿದ್ದಾರೆ.
ರಾಜನಾಥ್‌ರಿಗೆ ಬರೆದಿರುವ ಪತ್ರವೊಂದರಲ್ಲಿ ಸ್ವಾಮಿ, ಸುನಂದಾರ ದೇಹದಲ್ಲಿ ವಿಷದ ಅಂಶವಿತ್ತು. ಅವರು ಅಸಹಜ ಸಾವಿಗೆ ಈಡಾಗಿದ್ದಾರೆಂಬುದು ಸಾಬೀತಾಗಿದ್ದರೂ, ದಿಲ್ಲಿ ಪೊಲೀಸರು ಅಗತ್ಯ ಅಪರಾಧ ತನಿಖೆಯಲ್ಲಿ ಪ್ರಾಥಮಿಕ ಹೆಜ್ಜೆಯನ್ನೂ ಇರಿಸಿಲ್ಲ. ತನಿಖೆಯಲ್ಲಿ ಇಷ್ಟೊಂದು ವಿಳಂಬ ಯಾಕೆಂದು ಪ್ರಶ್ನಿಸಿದ್ದಾರೆ.
ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಪೊಲೀಸರ ಕರ್ತವ್ಯವಾಗಿದೆ. ಆದರೆ, ತನಿಖೆದಾರರು, ಆರೋಪಪಟ್ಟಿ ದಾಖಲಿಸುವಲ್ಲಿಯವರೆಗೂ ತಲುಪಿಲ್ಲ. ಅಮೆರಿಕದ ಎಫ್‌ಬಿಐ ಸಹ ವಿಷದ ಸ್ವರೂಪ ಗುರುತಿಸುವಲ್ಲಿ ಸಹಕರಿಸಿದೆ. ವಿಳಂಬದ ಹೊರತಾಗಿಯೂ ಅದು ಸುನಂದಾರ ದೇಹದಲ್ಲಿದ್ದ ವಿಷವನ್ನು ಗುರುತಿಸಲು ಶಕ್ತವಾಗಿದೆ. ಆದರೆ, 2015ರ ಆಗಸ್ಟ್‌ನಿಂದ ಈವರೆಗೆ, ದಿಲ್ಲಿ ಪೊಲೀಸರು ತರೂರ್ ಹಾಗೂ ಇತರರ ಕಸ್ಟಡಿ ವಿಚಾರಣೆ ಸಹಿತ ಕ್ರಿಮಿನಲ್ ತನಿಖೆ ಪ್ರಕ್ರಿಯೆಯ ಪ್ರಾಥಮಿಕ ಹೆಜ್ಜೆಯನ್ನೇ ಹಿಂದಕ್ಕೆಳೆಯುತ್ತಿದ್ದಾರೆಂದು ಸ್ವಾಮಿ ಆರೋಪಿಸಿದ್ದಾರೆ.





