ಸೋಮಾಲಿಯ ಹೇಳಿಕೆ: ಪ್ರಧಾನಿಯನ್ನು ರಕ್ಷಿಸಲು ಶ್ರೀಲಂಕದ ಮಕ್ಕಳ ಫೋಟೊ ಎತ್ತಿಹಿಡಿದ ಅಮಿತ್ ಶಾ!

ತಿರುವನಂತಪುರ, ಮೇ 15: ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮದಿಂದ ಬಿಜೆಪಿಗೆ ಆಗಿರುವ ತೀವ್ರ ಮುಜುಗರ ಸಾಲದೆಂಬಂತೆ ಅಮಿತ್ ಷಾ ಪಕ್ಷಕ್ಕೆ ಮತ್ತೊಂದು ಅವಮಾನ ತಂದಿದ್ದಾರೆ.
ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಷಾ, 2013ರ ಜುಲೈ ತಿಂಗಳ ಔಟ್‌ಲುಕ್ ಸಂಚಿಕೆಯನ್ನು ಪ್ರದರ್ಶಿಸಿದರು. ಕೇರಳದ ಅಲೆಪ್ಪಿಯಲ್ಲಿ ಬುಡಕಟ್ಟು ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾದ ಚಿತ್ರ ವರದಿಯನ್ನು ಇದು ಒಳಗೊಂಡಿತ್ತು. ಕೇರಳದಲ್ಲಿ ಬುಡಕಟ್ಟು ಜನರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಸಾಮಾಜಿಕ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸಾಧನೆ ಉತ್ತಮವಾಗಿಲ್ಲ ಎಂದು ಬಿಂಬಿಸುವುದು ಪ್ರಧಾನಿ ಉದ್ದೇಶವಾಗಿತ್ತು.
ಆದರೆ ಅಪೌಷ್ಟಿಕ ಮಗುವನ್ನು ಹಿಡಿದುಕೊಂಡ ಮಹಿಳೆಯ ಚಿತ್ರ ವಾಸ್ತವವಾಗಿ ಕೇರಳದ್ದಲ್ಲ; ಅದು ಶ್ರೀಲಂಕಾದ ಚಿತ್ರ ಎನ್ನುವ ಅಂಶವನ್ನು ಇದೀಗ ನಾರದ ಎಂಬ ವೆಬ್‌ಸೈಟ್ ಬಹಿರಂಗಗೊಳಿಸಿದೆ. ಈ ಚಿತ್ರವನ್ನು ಅಮೆರಿಕದ ರಕ್ಷಣಾ ಇಲಾಖೆ ವರದಿಯಲ್ಲಿ ಬಳಸಿಕೊಳ್ಳಲಾಗಿದ್ದು, ಅಮೆರಿಕ ಸಂಸತ್ತಿಗೆ ಸಲ್ಲಿಸಿರುವ, "ಶ್ರೀಲಂಕಾದ ಇತ್ತೀಚಿನ ಸಂಘರ್ಷಗಳಲ್ಲಿನ ಘಟನೆಗಳು" ಎಂಬ ವರದಿಯಲ್ಲಿ ಉಲ್ಲೇಖವಿದೆ ಎಂದು ನಾರದ ಸ್ಪಷ್ಟಪಡಿಸಿದೆ.





