ಯುಪಿಎಸ್‌ಸಿ ಪಾಸಾದ ಕಾಶ್ಮೀರ ವಕೀಲೆ ಶೀಮಾಗೆ ಕಿರಣ್ ಬೇಡಿ ಸ್ಫೂರ್ತಿ

ಶ್ರೀನಗರ, ಮೇ 15: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 209ನೆ ರ‍್ಯಾಂಕ್ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ ಶೀಮಾ ಖಸ್ಬಾ ಅವರು ಚಿಕ್ಕಂದಿನಲ್ಲೆ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಂತೆ ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ನಡೆಸಿದ ಪ್ರಯತ್ನದಲ್ಲಿ ಶೀಮಾ ಯಶಸ್ವಿಯಾಗಿದ್ದಾರೆ.
ದಿಲ್ಲಿಯಲ್ಲಿ ನ್ಯಾಯವಾದಿಯಾಗಿರುವ ಶೀಮಾ ಸೇರಿದಂತೆ ಹತ್ತು ಮಂದಿ ಜಮ್ಮು ಮತ್ತು ಕಾಶ್ಮೀರದಿಂದ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಅವರು ಐಪಿಎಸ್ ಅಧಿಕಾರಿಯಾಗಿ ಅಧಿಕಾರದ ದಂಡ ಹಿಡಿಯಲಿದ್ದಾರೆ.
" ಕಿರಣ್ ಬೇಡಿ ಅವರಂತೆ ಪೊಲೀಸ್ ಅಧಿಕಾರಿಯಾಗುವುದು ನನ್ನ ಬಾಲ್ಯದ ಕನಸಾಗಿತ್ತು. ಈ ಉದ್ದೇಶಕ್ಕಾಗಿ ನಡೆಸಿದ ಕಠಿಣ ಪ್ರಯತ್ನ ಫಲ ನೀಡಿದೆ. ಒಂದು ವೇಳೆ ನನಗೆ ಪೊಲೀಸ್ ಅಧಿಕಾರಿಯಾಗುವ ಅವಕಾಶ ಸಿಕ್ಕಿದರೆ ಸಂತಸದಿಂದಲೇ ಸೇವೆ ಸಲ್ಲಿಸುವೆನು” ಎಂದು 27ರ ಹರೆಯದ ಶೀಮಾ ಹೇಳುತ್ತಾರೆ.
ಶೀಮಾ ನಿವೃತ್ತ ಪೌರಾಯುಕ್ತ ಡಾ.ಜಿ.ಎನ್. ಖಸ್ಬಾ ಅವರ ಪುತ್ರಿ. ಕಳೆದ ಮೂರು ವರ್ಷಗಳಿಂದ ದಿಲ್ಲಿಯಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. "ಮಗಳ ಸಾಧನೆ ತೃಪ್ತಿ ನೀಡಿದೆ. ಸರ್ವ ಸ್ತುತಿ ಅಲ್ಲಾಹನಿಗೆ. ಮಗಳು ಕಠಿಣ ಪ್ರಯತ್ನದ ಮೂಲಕ ಯಶಸ್ಸು ಗಳಿಸಿದ್ದಾಳೆ ” ಎಂದು ಡಾ.ಜಿ.ಎನ್. ಖಸ್ಬಾ ಅಭಿಪ್ರಾಯಪಟ್ಟಿದ್ದಾರೆ.





