ಮಕ್ಕಳ ಬಗ್ಗೆ ಕಾಳಜಿ ಇದ್ದರೂ ಬೆಳೆಸುವ ಯೋಜನೆ ಸಮರ್ಪಕವಾಗಿಲ್ಲ: ಅಶ್ವಿನ್ ಎಲ್. ಶೆಟ್ಟಿ
‘ಶ್ರವಣ ಗೆಜ್ಜೆ-ಚಿಣ್ಣರ ರಂಗಪಯಣ’ ಉದ್ಘಾಟನೆ

ಪುತ್ತೂರು, ಮೇ 15: ನಮ್ಮ ದೇಶದಲ್ಲಿ ಹೆತ್ತವರಿಗೆ ತಮ್ಮ ಮಕ್ಕಳ ಬಗ್ಗೆ ಆತ್ಮೀಯ ಕಾಳಜಿ ಇದೆ. ಆದರೆ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಬೇಕೆಂಬ ಯೋಜನೆ ಹಾಕಿಕೊಳ್ಳುವುದು ತೀರಾ ಕಡಿಮೆ ಎಂದು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಹೇಳಿದ್ದಾರೆ.
ಪುತ್ತೂರು ತಾಲೂಕಿನ ಸವಣೂರು ಪ್ರಿಯಕಾರಣಿ ಸಭಾವನದಲ್ಲಿ ಸವಣೂರು ಶ್ರವಣ ರಂಗ ಸಾಂಸ್ಕೃತಿಕ ಕಲಾಕೇಂದ್ರದ ವತಿಯಿಂದ ಸವಣೂರು ಯುವಕಮಂಡಲದ ಸಹಯೋಗದಲ್ಲಿ ರವಿವಾರ ಆರಂಭಗೊಂಡ ಒಂದು ವಾರಗಳ ‘ಶ್ರವಣ ಗೆಜ್ಜೆ-ಚಿಣ್ಣರ ರಂಗಪಯಣ’ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಇಂತಹ ಶಿಬಿರಗಳನ್ನು ನಡೆಸುವುದರಿಂದ ಮಕ್ಕಳಲ್ಲಿನ ಪ್ರತಿಭೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಸವಣೂರಿನ ಪುದುಬೆಟ್ಟು ಜಿನಮಂದಿರದ ಆಡಳಿತ ಮೊಕ್ತೇಸರ ಬಿ.ಶತ್ರುಂಜಯ ಆರಿಗ ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ., ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅತಿಥಿಗಳಾಗಿ ಮಾತನಾಡಿದರು.
ಸವಣೂರು ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ.ಶೆಟ್ಟಿ, ಪದ್ಮಶ್ರೀ ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಎಂ, ರಾಮಕೃಷ್ಣ ಪ್ರಭು, ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ, ಸವಣೂರು ಸಹಕಾರಿ ಸಂಘದ ನಿರ್ದೇಶಕ ತಾರಾನಾಥ ಕಾಯರ್ಗ, ಸವಣೂರು ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ಶಿಕ್ಷಕರಾದ ವೆಂಕಟೇಶ್ ಅನಂತಾಡಿ, ಸುಜಯ ಗಿ.ಸುಲಾಯ, ಯತೀಶ್ ಕುಮಾರ್, ಕೆ.ಎಂ.ರಶ್ಮಿತಾ, ವಿಶಾಲಾಕ್ಷಿ, ಸಂಪನ್ಮೂಲ ವ್ಯಕ್ತಿಗಳಾದ ಲಿಂಗಪ್ಪಬೆಳ್ಳಾರೆ, ಜಯಪ್ರಕಾಶ್ ಮೋಂಟಡ್ಕ, ರಮೇಶ್ ಉಳಯ ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕ ತಾರಾನಾಥ್ ಸವಣೂರು ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ವಸಂತಿ ತಾರಾನಾಥ್ ನಿರೂಪಿಸಿದರು.







