ತೆಂಕಿಲ: ಮನೆಯಲ್ಲಿ ಕಳ್ಳತನ

ಪುತ್ತೂರು, ಮೇ 15: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿರುವ ಕಪಾಟುಗಳನ್ನು ಜಾಲಾಡಿ, ಸೊತ್ತುಗಳನ್ನು ಕಳವು ಮಾಡಿ ಪರಾರಿಯಾದ ಘಟನೆ ಪುತ್ತೂರು ನಗರದ ಹೊರವಲಯದ ತೆಂಕಿಲ ಎಂಬಲ್ಲಿ ರವಿವಾರ ಬೆಳಕಿಗೆ ಬಂದಿದೆ.
ತೆಂಕಿಲದಲ್ಲಿರುವ ನ್ಯಾಯವಾದಿ ಕೆ.ಆರ್.ಆಚಾರ್ಯರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಕಳುವಾದ ಸೊತ್ತುಗಳ ವೌಲ್ಯ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ರವಿವಾರ ಮನೆಯ ಕೆಲಸದಾಕೆ ಬಂದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ. ನ್ಯಾಯವಾದಿ ಕೆ.ಆರ್. ಆಚಾರ್ಯ ಮತ್ತು ಮನೆಯವರು ಶುಕ್ರವಾರ ಮನೆಗೆ ಬೀಗ ಹಾಕಿ ಖಾಸಗಿ ಕಾರ್ಯ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಕೆ.ಆರ್. ಆಚಾರ್ಯರ ಪತ್ನಿಯ ಸಹೋದರ ಸತೀಶ್ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಂುಲ್ಲಿ ಪ್ರಕರಣ ದಾಖಲಾಗಿದೆ. ಕೆಲಸದಾಕೆ ಸತೀಶ್‌ರಿಗೆ ದೂರವಾಣಿ ಮೂಲಕ ರವಿವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಕಾಸರಗೋಡಿನ ಎಡನೀರು ನಿವಾಸಿಯಾದ ಸತೀಶ್ ಪುತ್ತೂರಿಗೆ ಆಗಮಿಸಿ ಕಳವಿನ ಕೃತ್ಯವನ್ನು ಖಚಿತಪಡಿಸಿಕೊಂಡು, ಬಳಿಕ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ನ್ಯಾಯವಾದಿ ಕೆ.ಆರ್.ಆಚಾರ್ಯ ಊರಿಗೆ ಮರಳಿದ ಬಳಿಕವಷ್ಟೇ ಕಳವಿನ ವಿವರವಾದ ಮಾಹಿತಿ ಲಭ್ಯವಾಗಲಿದೆ. ಪ್ರಾಥಮಿಕ ಮಾಹಿತಿಯಂತೆ ಮನೆಯೊಳಗಿದ್ದ ಬೆಳ್ಳಿಯ ಸೊತ್ತುಗಳನ್ನು ಮತ್ತು ನಗದು ಹಣವನ್ನು ಕಳ್ಳರು ಕದ್ದೊಯ್ದಿರಬಹುದು ಎಂದು ಸಂಶಯಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







